ಭಾರತದ ಎಲ್ಲ ವಾಯುನೆಲೆಗಳು ಸುರಕ್ಷಿತವಾಗಿವೆ: ವಿದೇಶಾಂಗ ಸಚಿವಾಲಯ
ನವದೆಹಲಿ: ರಕ್ಷಣಾ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ದಾಳಿ, ಪ್ರತಿ ದಾಳಿಗಳ ಮಾಹಿತಿ ನೀಡುತ್ತಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ದಾಳಿ ಸಂಬಂಧ ಮಾಹಿತಿ ನೀಡಿದ ನಂತರ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿವರವಾದ ಮಾಹಿತಿ ನೀಡಿದರು. ಪಾಕ್ ಸುಳ್ಳುಗಳನ್ನು ಬಯಲಿಗೆಳೆದರು.
ಭಾರತದ ವಾಯುನೆಲೆಗಳನ್ನು ಧ್ವಂಸ ಮಾಡಲಾಗಿದೆ ಎಂಬ ಪಾಕಿಸ್ತಾನದ ಸುದ್ದಿಗಳು ಸುಳ್ಳು ಎಂದ ಮಿಸ್ರಿ, ಭಾರತದ ಎಲ್ಲ ವಾಯುನೆಲೆಗಳು ಸುರಕ್ಷಿತವಾಗಿವೆ ಎಂದು ದೃಢಪಡಿಸಿದರು. ಆದರೆ, ಪಾಕಿಸ್ತಾನವು ನಾಗರಿಕರನ್ನು, ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ ಎಂಬುದನ್ನು ಒಪ್ಪಿಕೊಂಡ ಅವರು, ಪಾಕಿಸ್ತಾನದ ಎಲ್ಲ ದಾಳಿಗಳನ್ನು ತಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಪಾಕಿಸ್ತಾನ ವಿರುದ್ಧದ ಸೇನಾ ಕಾರ್ಯಾಚರಣೆಗೆ ಭಾರತ ಸರ್ಕಾರದ ವಿರುದ್ಧ ಸ್ವದೇಶದಲ್ಲೇ ಆಕ್ಷೇಪಗಳು ವ್ಯಕ್ತವಾಗಿವೆ ಎಂಬ ಶತ್ರು ರಾಷ್ಟ್ರದ ಆರೋಪಗಳಿಗೆ ಮಿಸ್ರಿ ತಿರುಗೇಟು ನೀಡಿದರು. ನಮ್ಮದು ಪಾಕಿಸ್ತಾನದ ರೀತಿಯ ದೇಶವಲ್ಲ. ಜಗತ್ತಿನಲ್ಲೇ ಬಲುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅಭಿಪ್ರಾಯ ಸ್ವಾತಂತ್ರ್ಯಕ್ಕೆ ನಾವು ಬೆಲೆ ಕೊಡುತ್ತೇವೆ. ಆದಾಗ್ಯೂ, ಭಯೋತ್ಪಾದಕರ ಪೋಷಕ ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆಗೆ ನಮ್ಮ ದೇಶದಲ್ಲಿ ವಿರೋಧ ವ್ಯಕ್ತವಾಗಿಲ್ಲ ಎಂದು ಸ್ಪಷ್ಟಪಡಿಸಿದರು.