ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ಭಜ್ಜಿ ಎಚ್ಚರಿಕೆ ಮಾತು..!
ಆಸ್ಟ್ರೇಲಿಯಾದ ಬೌಲರ್‌ಗಳ ವಿರುದ್ಧ ಆಡುವಾಗ ಅದರಲ್ಲೂ ಆಫ್ ಸ್ಪಿನ್ನರ್ ನೇಥನ್ ಲಿಯಾನ್ ಎದುರು ಆಡುವಾಗ ಭಾರತೀಯ ಬ್ಯಾಟ್ಸ್‌ಮನ್‌ಗಳು ತುಂಬಾ ಎಚ್ಚರಿಕೆ ವಹಿಸಬೇಕು. ಆತ ಬೌನ್ಸ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಬಲೆಯಲ್ಲಿ ಬೀಳಿಸಬಲ್ಲರು ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
ನೇಥನ್ ಲಿಯಾನ್ ವಿರುದ್ಧ ಆಡುವಾಗ ಭಾರತದ ಬ್ಯಾಟ್ಸ್‌ಮನ್‌ಗಳು ಎಚ್ಚರ ವಹಿಸಬೇಕು. ಲಿಯಾನ್ ಫ್ಲೈಟ್, ಬೌನ್ಸ್ ಮತ್ತು ಸಾಂಪ್ರದಾಯಿಕ ಸ್ಪಿನ್ ಮೂಲಕ ಹೆಚ್ಚು ವಿಕೆಟ್‌ಗಳನ್ನು ಪಡೆಯಬಲ್ಲರು ಎಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಎರಡನೇ ಯಶಸ್ವಿ ಸ್ಪಿನ್ನರ್ ಎನಿಸಿದ್ದ ಹರ್ಭಜನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೇಥನ್ ಲಿಯಾನ್ ಬೌಲಿಂಗ್ ಮಾಡುವ ರೀತಿ ನನಗೆ ನೋಡಲು ಖುಷಿಯಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಸ್ಪಿನ್ನರ್‌ಗಳಿಗೆ ಬೌಲಿಂಗ್ ಮಾಡೋದು ಕಷ್ಟ, ಆದರೂ ಲಿಯಾನ್ ಸೊಗಸಾಗಿ ಬೌಲಿಂಗ್ ಮಾಡ್ತಾರೆ. ಫ್ಲೈಟ್ಸ್, ಸ್ಪಿನ್ ಮತ್ತು ಬೌನ್ಸ್‌ನಲ್ಲೂ ಅವರು ವಿಕೆಟ್ ಪಡೆಯುತ್ತಾರೆ,’ ಎಂದು ಎಂದು ಎಎನ್‌ಐ ಜೊತೆ ಮಾತನಾಡಿದ ಭಜ್ಜಿ ವಿವರಿಸಿದ್ದಾರೆ.
33ರ ಹರೆಯದ ಲಿಯಾನ್ ಭಾರತದ ವಿರುದ್ಧ ಯಶಸ್ವಿ ಬೌಲರ್ ಎನಿಸಿದ್ದಾರೆ. ಕೇವಲ 18 ಟೆಸ್ಟ್ ಪಂದ್ಯಗಳಲ್ಲಿ 85 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟಾರೆಯಾಗಿ 96 ಟೆಸ್ಟ್ ಪಂದ್ಯಗಳಲ್ಲಿ ಲಿಯಾನ್ 390 ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿಯಾನ್ 400 ವಿಕೆಟ್ ಪಡೆದರೆ, ಮುತ್ತಯ್ಯ ಮುರಳೀಧರನ್, ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಬಳಿಕ 400 ವಿಕೆಟ್ ಪಡೆದ 4ನೇ ಸ್ಪಿನ್ನರ್ ಆಗಿ ಗುರುತಿಸಿಕೊಳ್ಳಲಿದ್ದಾರೆ.
ಮತ್ತೆ ಮನಮೆಚ್ಚುವ ಕೆಲಸ ಮಾಡಿದ ಸೋನುಸೂದ್..!
ಮುಂಬೈ: ಕೊರೋನಾವೈರಸ್ ಸಾಂಕ್ರಾಮಿಕದ ವೇಳೆ ಬದುಕಿನ ಮೂಲವನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ದುರ್ಬಲ ಜನರಿಗೆ ಇ- ರಿಕ್ಷಾ ಒದಗಿಸುವ ನೂತನ ಕಾರ್ಯಕ್ರಮವೊಂದನ್ನು ಬಾಲಿವುಡ್ ನಟ ಸೋನು ಸೂದ್ ಚಾಲನೆ ನೀಡಿದ್ದಾರೆ.
‘ದಬಾಂಗ್’ ‘ಜೋಧಾ ಅಕ್ಬರ್’ ಮತ್ತು ‘ಸಿಂಬಾ’ ಚಿತ್ರಗಳ ಮೂಲಕ ಹೆಸರಾಗಿರುವ ಸೋನು ಸೂದ್, ಈ ವರ್ಷದ ಆರಂಭದಲ್ಲಿ ಕೊರೋನಾವೈರಸ್ ಕಾಣಿಸಿಕೊಂಡ ನಂತರ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ತಲುಪಲು ಪರಿತಪಿಸುತ್ತಿದ್ದ ವಲಸೆ ಜನರು ತಮ್ಮೂರಿಗೆ ಮರಳಲು ಸೋನ್ ಸೂದ್ ತಮ್ಮ ಸ್ವಂತ ಹಣದಲ್ಲಿ ಬಸ್ ಗಳ ವ್ಯವಸ್ಥೆ ಮಾಡಿದ್ದರು.
‘ಖುದ್ ಕಮಾವೊ ಘರ್ ಚಲಾವೊ’ ಎಂಬ ಹೆಸರಿನ ಈ ಕಾರ್ಯಕ್ರಮ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು 47 ವರ್ಷದ ಸೋನ್ ಸೂದ್ ಹೇಳಿದ್ದಾರೆ.
ಏನನ್ನಾದರೂ ನೀಡುವುದಕ್ಕಿಂತಲೂ ಉದ್ಯೋಗ ಒದಗಿಸುವುದು ಪ್ರಮುಖವಾದದ್ದು ಎಂಬುದರಲ್ಲಿ ನಂಬಿಕೆ ಹೊಂದಿದ್ದು, ಈ ಕಾರ್ಯಕ್ರಮ ಅವರನ್ನು ಸ್ವಾವಲಂಬಿಗಳನ್ನಾ ಮಾಡುವ ಮೂಲಕ ಮತ್ತೆ ತಮ್ಮ ಕಾಲುಗಳ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ಇರುವುದಾಗಿ ಸೂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಂಕ್ರಾಮಿಕದ ವೇಳೆ ಉದ್ಯೋಗ ಕಳೆದುಕೊಂಡವರನ್ನು ಕಂಪನಿಗಳಿಗೆ ಸಂಪರ್ಕಿಸುವುದು ಮತ್ತು ಅವರ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಈ ಹಿಂದೆ ಪ್ರವಾಸಿ ರೋಜ್ಗಾರ್ ಆ್ಯಪ್ ನ್ನು ಸಹ ಸೋನು ಸೂದ್ ಪ್ರಾರಂಭಿಸಿದ್ದರು.
ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ನಾಯಕತ್ವದ ಬಗ್ಗೆ ಗವಾಸ್ಕರ್ ಏನಂದ್ರು?
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಇನ್ನು ನಾಯಕತ್ವದ ಒತ್ತಡದಿಂದ ರಹಾನೆ ತತ್ತರಿಸುವುದಿಲ್ಲ ಎಂದು ಬ್ಯಾಟಿಂಗ್ ಶ್ರೇಷ್ಠ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಹಗಲು-ರಾತ್ರಿ ಟೆಸ್ಟ್ ನಂತರ ಕೊಹ್ಲಿ ಪಿತೃತ್ವ ರಜೆ ತೆಗೆದುಕೊಳ್ಳುತ್ತಿದ್ದಾರೆ. ನಾಲ್ಕು ಟೆಸ್ಟ್ ಸರಣಿಯ ಉಳಿದ ಮೂರು ಪಂದ್ಯಗಳಲ್ಲಿ ತಂಡವನ್ನು ರಹಾನೆ ಮುನ್ನಡೆಸುವ ನಿರೀಕ್ಷೆಯಿದೆ.
“ಅಜಿಂಕ್ಯ ರಹಾನೆ ಅವರ ಮೇಲೆ ನಿಜವಾದ ಒತ್ತಡವಿಲ್ಲ, ಏಕೆಂದರೆ ಅವರು ತಂಡವನ್ನು ಎರಡೂ ಬಾರಿ ಮುನ್ನಡೆಸಿ ಗೆದ್ದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ಮುನ್ನಡೆಸಿದ್ದಾಗ ಭಾರತ ಗೆದ್ದಿದೆ. ನಂತರ ಅಫ್ಘಾನಿಸ್ತಾನ ವಿರುದ್ಧ ಸಹ ತಂಡವನ್ನು ಮುನ್ನಡೆಸಿದ್ದು ಅಂದೂ ಭಾರತ ಗೆದ್ದಿತು ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.
ಹೀಗಾಗಿ ನಾಯಕತ್ವಕ್ಕೆ ಸಂಬಂಧಿಸಿದಂತೆ, ಯಾವುದೇ ಒತ್ತಡವಿಲ್ಲ, ಏಕೆಂದರೆ ರಹಾನೆ ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂದು ಅವರಿಗೆ ತಿಳಿದಿದೆ. “ಆದ್ದರಿಂದ, ಕ್ಯಾಪ್ಟನ್ ಆಗಿರುವುದು ಅಥವಾ ಕ್ಯಾಪ್ಟನ್ ಆಗಿ ಮುಂದುವರಿಯುವುದು ಅವರ ಚಿಂತನೆಯ ಭಾಗವಾಗಲಿದೆ ಎಂದು ನಾನು ಭಾವಿಸುವುದಿಲ್ಲ ಎಂದರು.
ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಡ್ರಾದಲ್ಲಿ ಕೊನೆಗೊಂಡ ಎರಡು ಅಭ್ಯಾಸ ಪಂದ್ಯಗಳಲ್ಲಿ ರಹಾನೆ ತಂಡದ ನಾಯಕತ್ವ ವಹಿಸಿದ್ದರು.
ಟಿವಿ ಇರದ ಮನೆಯ ಪೋರ ಇಂದು ಏನಾಗಿದ್ದಾರೆ ಗೊತ್ತಾ?
ಅವರ ಮನೆಯಲ್ಲಿ ಟಿವಿ ಇರಲಿಲ್ಲ. ಪ್ರತಿದಿನ ಬಸ್ ನಲ್ಲಿ ಪ್ರಯಾಣ. ಅಪ್ಪ ಯಾವಾಗಾಲಾದರೂ ಅಣ್ಣ, ತಮ್ಮ ಇಬ್ಬರನ್ನೂ ಅಮ್ಮನ ಜೊತೆ ಲ್ಯಾಂಬ್ರೆಟಾ ಸ್ಕೂಟರ್ ನಲ್ಲಿ ಹತ್ತಿಸಿದರೆ ಅದೇ ಸ್ವರ್ಗ..! ಅಣ್ಣ, ತಮ್ಮ ಇಬ್ಬರೂ ಮಲಗುತ್ತಿದ್ದುದು ಮನೆಯ ಹಾಲ್ ನಲ್ಲಿ. ಕಷ್ಟಪಟ್ಟು ಓದಿ ಬೆಳೆದ ಹುಡುಗ ಇಷ್ಟು ಬಹು ಎತ್ತರಕ್ಕೆ ಬೆಳೆಯುತ್ತಾನೆಂದು ಯಾರೂ ಊಹಿಸಿರಲಿಲ್ಲ. ಅವರೀಗ ಪ್ರತಿಷ್ಠಿತ ಕಂಪನಿಯ ಸಿಇಒ, ವಿಶ್ವಾದ್ಯಂತ ಕೋಟ್ಯಂತರ ಯುವ ಜನರ ಸ್ಫೂರ್ತಿಯ ಚಿಲುಮೆ..! ಬಾಲ್ಯದಲ್ಲಿ ಟಿವಿ ಕಾಣದ ಪೋರನನ್ನು ಜಗತ್ತೇ ಠೀವಿಯಿಂದ ಗೌರವಿಸುತ್ತಿದೆ..!
ಯಸ್, ಹೀ ಈಸ್ ಅವರ್ ಪ್ರೌಡ್ ಇಂಡಿಯನ್ ಮಿಸ್ಟರ್ ಸುಂದರ್ ಪಿಚ್ಚೈ. ಪ್ರತಿಷ್ಠಿತ ಗೂಗಲ್ ಕಂಪನಿಯ ಸಿಇಒ. ಇತ್ತೀಚೆಗೆ ಇಂಜಿನಿಯರಿಂಗ್ ಮುಗಿಸಿದ ಯಾರನ್ನೇ ಕೇಳಿ ನೋಡಿ, ನನಗೆ ಗೂಗಲ್ ನಲ್ಲಿ ಕೆಲಸ ಸಿಗಬೇಕು ಅಂತ ಹೇಳ್ತಾರೆ. ಅಂತದ್ರಲ್ಲಿ ಗೂಗಲ್ ಕಂಪನಿಯ ಸಿಇಒ ಆಗೋದು ತಮಾಷೆನಾ? ಆದರೆ, ಆ ತಮಾಷೆ, ಊಹೆಯ ಆಚೆಗೆ ಪರಿಶ್ರಮವಿದ್ದರೆ ಯಶಸ್ಸು ನಮ್ಮ ಕೈಬಿಡುವುದಿಲ್ಲ ಅನ್ನೋದನ್ನು ಸಾಬೀತು ಮಾಡಿ ತೋರಿಸಿದ್ದಾರೆ ಸುಂದರ್.
ಅಂದಹಾಗೇ ಪಿಚ್ಚೈ ಹುಟ್ಟಿದ್ದು, ತಮಿಳುನಾಡಿನ ಮಧುರೈನಲ್ಲಿ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬ ಇವರದ್ದು. ಅಪ್ಪ, ಅಮ್ಮ ಹಾಗೂ ಅಣ್ಣ, ಇಷ್ಟೇ ಪ್ರಪಂಚ. ಆದ್ರೆ, ಅವರ ಫ್ಯಾಮಿಲಿ ಚೆನ್ನೈನಲ್ಲಿ ನೆಲೆ ನಿಂತಿದ್ದರಿಂದ ಪಿಚ್ಚೈ ಕೂಡ ಅಲ್ಲೇ ಆಡಿ ಬೆಳೆದರು. ಇದನ್ನು ಬಿಟ್ಟರೆ ಓದು, ಕ್ರಿಕೆಟ್ ಆಡುವುದು. ಎಂದೂ ಅದರಾಚೆ ಯೋಚಿಸಿದವರಲ್ಲ ಸುಂದರ್.
ಸುಂದರ್ ಮನೆಗೆ ತಡವಾಗಿ ಬರುತ್ತಿರಲಿಲ್ಲ. ಕುಂಟು ನೆಪ ಹೇಳಿ ಶಾಲೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಮಾರ್ಕ್ಸ್ ಕಾರ್ಡ್ ಗ್ರೇಡ್ ಯಾವತ್ತೂ ಕಡಿಮೆಯಾಗಲಿಲ್ಲ. ಮನೆಯಲ್ಲಿ ಟಿವಿ ಇಲ್ಲದಿದ್ರೂ ಆ ಬಗ್ಗೆ ಕೊರಗಲಿಲ್ಲ. ಗೆಳೆಯರು ತಮ್ಮ ತಂದೆ, ತಾಯಿ ಜೊತೆ ಕಾರಿನಲ್ಲಿ ಬಂದಾಗಲೂ ಇವರಿಗೆ ಕಾರು ಇರಬೇಕಿತ್ತು ಎಂದನಿಸಲಿಲ್ಲ.
ಓದಿನಲ್ಲಿ ಆಸಕ್ತಿ ಹೊಂದಿದ್ದ ಸುಂದರ್ ಏನಾದರೂ ಸಾಧಿಸಬೇಕೆಂಬ ಕನಸು ಕಂಡಿದ್ದರು. ಅವರು ತೆಗೆದ ಅಂಕಗಳಿಂದ ಖರಗ್ ಪುರ ಐಐಟಿ ಸೇರಿದರು. ಸ್ಕಾಲರ್ ಶಿಪ್ ಪಡೆದು ಓದು ಮುಂದುವರಿಸಿದ್ರು.
ಐಐಟಿ ಯಲ್ಲಿ ಓದು, ಓದು, ಓದುವುದಷ್ಟೇ ಅವರ ಕೆಲಸ. ಅಲ್ಲಿಂದ ಉನ್ನತ ವ್ಯಾಸಂಗಕ್ಕೆ ಪ್ರಯಾಣ ಬೆಳೆಸಿದ್ದು ಅಮೆರಿಕಕ್ಕೆ. ಅಲ್ಲಿಯೂ ಸ್ಕಾಲರ್ ಶಿಪ್ ಅವರ ಜೊತೆಗಿತ್ತು. ಅಮ್ಮನಿಗೆ ಮಗನನ್ನು ಅಲ್ಲಿಗೆ ಕಳಿಸಲು ಇಷ್ಟವಿರಲಿಲ್ಲ. ಸುಲಭವೂ ಇರಲಿಲ್ಲ. ಕಷ್ಟಪಟ್ಟ ಮಗನ ಜೀವನ ಚೆನ್ನಾಗಿರಲಿ ಎಂದು ಹಣ ಕೂಡಿಸಿಕೊಟ್ಟರು. ತ್ಯಾಗವನ್ನೂ ಮಾಡಿದರು. ಅಮೆರಿಕದ ಸ್ಪ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿದರು.
ಅಮೆರಿಕದ ಜೀವನ ಅಷ್ಟು ಸುಲಭವಿರಲಿಲ್ಲ. ಆರಂಭದಲ್ಲಿ ಆಶ್ರಯ ಪಡೆಯಲು ಕಷ್ಟವಿತ್ತು. ಪಿಜಿ ಯಲ್ಲಿದ್ದುಕೊಂಡು ಶಿಕ್ಷಣ ಮುಂದುವರೆಸಿದರು. ಸ್ಕಾಲರ್ಶಿಪ್ ಜೀವನ ನಡೆಸಲು ಕೈಹಿಡಿಯಿತು. ಅಲ್ಲಿ ಶಿಕ್ಷಣ ಮುಗಿಸಿದ ನಂತ್ರ ಮೆಕ್ ಕಿನ್ಲೆ ಕಂಪನಿಯಲ್ಲಿ ಕೆಲಸ ಆರಂಭಿಸಿದ್ರು. ನಂತರ ಗೂಗಲ್ ಕಂಪನಿಯಿಂದ ಆಫರ್ ಬಂದಿತು. ಅಲ್ಲಿಂದ ಜೀವನ ತಿರುವು ಪಡೆಯಿತು.
ಆರಂಭದಲ್ಲಿ ಗೂಗಲ್ ಕ್ರೋಮ್ ನಲ್ಲಿ ಮಹತ್ವದ ಪಾತ್ರ ವಹಿಸಿದರು. ಗೂಗಲ್ ಕ್ರೋಮ್ ಇಂದು ಪ್ರತಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಗಳಲ್ಲಿ ಇನ್ ಸ್ಟಾಲ್ ಆಗಿದ್ದರೆ ಅದರಲ್ಲಿ ಸುಂದರ್ ಪಾತ್ರ ಮುಖ್ಯವಾದುದು.
ನಂತರದಲ್ಲಿ ಗೂಗಲ್ ಡ್ರೈವ್ ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿದ ಅವರ ಕೆಲಸದ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದ್ರಿಂದ ಮತ್ತಷ್ಟು ಉತ್ತೇಜರಾದ ಸುಂದರ್ ಜಿ ಮೇಲ್, ಗೂಗಲ್ ಮ್ಯಾಪ್ ಡೆವಲಪ್ ಮಾಡುವಲ್ಲಿ ಶ್ರಮ ವಹಿಸಿ ಸೈ ಎನಿಸಿಕೊಂಡರು.
ಒಟ್ಟಾರೆ, ಇಂದು ಜಗತ್ತಿನ ಮೂಲೆಮೂಲೆಯಲ್ಲಿ ಗೂಗಲ್ ವ್ಯಾಪಿಸುವಂತೆ ಕೆಲಸ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಸುಂದರ್. ಹೀಗೆ ಗೂಗಲ್ ಕಂಪನಿಯ ವಿವಿಧ ಪ್ರಾಡೆಕ್ಟ್ ಗಳನ್ನ ರೂಪಿಸಿದ ಫಲ ಅವರೀಗ ಅದೇ ಕಂಪನಿಯಲ್ಲಿ ಸಿಇಓ ಹುದ್ದೆಗೆ ಹೇರುವಂತೆ ಆಗಿದೆ. ಏನೇ ಮಾಡಿದರೂ ಶ್ರದ್ಧೆಯಿಂದ ಮಾಡಬೇಕು ಅನ್ನೋದು ಸುಂದರ್ ಅವರ ಕಿವಿಮಾತು. ಅದೇನೆ ಇರಲಿ. ಕಷ್ಟಪಟ್ಟು ಓದಿ, ಯುವಕರ ಐಕಾನ್ ಆಗಿರುವ ಸುಂದರ್ ಪಿಚೈ ಸಾಧನೆ ಎಲ್ಲರಿಗೂ ಪ್ರೇರಣೆ.