ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!

Date:

ಶಾಲೆಯಲ್ಲಿ ಒಂದು ದಿನ ಗಣಿತ ತರಗತಿಯಲ್ಲಿ ಶೂನ್ಯ ಗುಂಪಿನ ಪರಿಕಲ್ಪನೆಗೆ ಉದಾಹರಣೆ ಕೊಡು ಎಂದಾಗ, “ಈವರೆಗೂ ಯಾರೂ ಭಾರತೀಯ ಮಹಿಳೆ ಗಗನಯಾತ್ರಿಯಾಗಿಲ್ಲ, ಹಾಗಾಗಿ ಭಾರತೀಯ ಮಹಿಳಾ ಗಗನಯಾತ್ರಿಯದು ಶೂನ್ಯ ಗುಂಪು” ಎಂದು ಉತ್ತರಿಸಿದ್ದಳು. ಆ ಹುಡುಗಿ ಮುಂದೊಂದು ದಿನ ಮೊದಲ ಭಾರತ ಸಂಜಾತ ಗಗನಯಾತ್ರಿಯಾಗಿ ಆ ಜಾಗ ತುಂಬುತ್ತಾಳೆ ಅಂತ ಯಾರೂ ಅಂದುಕೊಂಡಿರ್ಲಿಲ್ಲ..!

ಹೌದು, ಅಂತಾರಾಷ್ಟ್ರೀಯ ಗಗನಯಾತ್ರಿ ಕಲ್ಪನಾ ಚಾವ್ಲಾ. ನಿಜಕ್ಕೂ ಮರೆಯಲಾಗದ ಗಗನತಾರೆ. ಹೆಣ್ಣು ಮಕ್ಕಳಿಗೆ ಅಪೂರ್ವ ಮಾದರಿ. ಹಿಡಿದಿಟ್ಟ ವ್ಯವಸ್ಥೆಯಿಂದ ಕನಸು, ನಿರೀಕ್ಷೆಯ ಆಗಸಕ್ಕೆ ಲಕ್ಷಾಂತರ ಭಾರತೀಯ ಹೆಣ್ಣು ಮಕ್ಕಳಿಗೆ ಪುಟಿಯಲು ಚೈತನ್ಯದ ಚಿಲುಮೆ.

ಕಲ್ಪನಾ ಚಾವ್ಲಾ, ಹುಟ್ಟಿದ್ದು 1962ರ ಮಾರ್ಚ್ 17ರಂದು. ಹರಿಯಾಣದ ಕರ್ನಾಲ್​ನಲ್ಲಿ. ಚಿಕ್ಕಂದಿನಿಂದಲೇ ವಿಜ್ಞಾನ ಅಂದರೆ ಅಚ್ಚುಮೆಚ್ಚು. ಸಮಯ ಹಾಳು ಮಾಡುವುದೆಂದರೆ ಆಗದು. ಅವರ ವಯಸ್ಸಿನವರೆಲ್ಲರೂ ಮನೆಯಲ್ಲಿ ಸಮಾರಂಭವಿದ್ದರೆ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದರು. ಆದರೆ, ಕಲ್ಪನಾ ಮಾತ್ರ ತಮ್ಮ ಸ್ವಂತ ಅಕ್ಕನ ಮದುವೆಯಲ್ಲಿಯೂ ವಿಶೇಷ ಉಡುಗೆ ತೊಟ್ಟು ಸಂಭ್ರಮಿಸಲಿಲ್ಲ.
ನೋಡಿ, ಅವರಿಗಿದ್ದ ಸಹಜ ಕುತೂಹಲ, ಅನ್ವೇಷಕ ಬುದ್ಧಿ, ಸ್ವತಂತ್ರ ಸ್ವಭಾವ ಅನನ್ಯವಾದದ್ದು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಅನವಶ್ಯಕ ಎನ್ನುವ ಕಾಲದಲ್ಲೂ ಅವರು ಅಮ್ಮನ ಪ್ರೋತ್ಸಾಹದಿಂದ ಕಾಲೇಜಿಗೆ ಹೋದರು. ಫ್ಲೈಟ್ ಇಂಜಿನಿಯರ್ ಬಿಟ್ಟು ಬೇರೆ ಏನೂ ಆಗಲಾರೆ ಎಂದು ಪಣ ತೊಟ್ಟ ಕಲ್ಪನಾ ವಾಯುಯಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಕಲೆ ಹಾಕಿ ಬಿಡದೇ ಓದುತ್ತಿದ್ದರು.
ಕಾಲೇಜಿನಿಂದ ಮೂರನೇ ರ್ಯಾಂಕ್​ನಲ್ಲಿ ಉತ್ತೀರ್ಣರಾದರು. ದೇಶದ ಮೊದಲ ಮಹಿಳಾ ಏರೋನಾಟಿಕಲ್ ಇಂಜಿನಿಯರ್ ಆದರು. ವಿದೇಶದಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್​ನಲ್ಲಿ ಮಾಸ್ಟರ್ ಕೋರ್ಸ್ ಮುಗಿಸಿ ಅಮೆರಿಕಾದ ಜೀನ್ ಪಿಯರ್ ಹ್ಯಾರಿಸನ್ ಜತೆ ಮದುವೆಯಾದರು. ಮೊದಲು ಒಂದು ಇಂಜಿನ್​ ಅನಂತರ, ಬಹು ಇಂಜಿನ್​ಗಳುಳ್ಳ ವಿಮಾನ ಹಾರಿಸುವುದನ್ನು ತನ್ನ ಗಂಡನಿಂದಲೇ ಕಲಿತರು. ಜತೆಗೆ ಪರವಾನಗಿ ಕೂಡ ಪಡೆದು ವೈಮಾನಿಕ ಹಾರಾಟದ ಬೋಧಕರಾಗಿಯೂ ಬಡ್ತಿ ಪಡೆದರು.

ಏರೋಸ್ಪೇಸ್ ಇಂಜಿನಿಯರಿಂಗ್​ನಲ್ಲಿ ಡಾಕ್ಟರೇಟ್ ಮುಗಿಸಿ ನಾಸಾದಲ್ಲಿ ಕೆಲಸ ಮಾಡಲು ಆರಂಭಿಸಿದರು. 1977ರಲ್ಲಿ ಸ್ಪೇಸ್ ಶಟಲ್ ಎಸ್​ಟಿಎಸ್-87ನ ಪ್ರೈಮ್ ರೊಬೋಟಿಕ್ ಆಮ್ರ್ ಆಪರೇಟರ್ ಆಗಿ ಕಲ್ಪನಾ ಅವರನ್ನು ನಿಯೋಜಿಸಲಾಗಿತ್ತು. ತನ್ನ ಮಿಷನ್​ನ ಮೊದಲ ಭಾಗವಾಗಿ ಭೂಮಿಯ 252 ಕಕ್ಷೆಗಳಲ್ಲಿ 3.5 ದಶಲಕ್ಷ ಮೈಲು ಕ್ರಮಿಸಿ, 376 ಗಂಟೆ 34 ನಿಮಿಷ ಬಾಹ್ಯಾಕಾಶದಲ್ಲಿದ್ದರು. ಪ್ರಪ್ರಥಮವಾಗಿ ಬಾಹ್ಯಾಕಾಶಕ್ಕೆ ತೆರಳಿದ ಭಾರತ ಸಂಜಾತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕೆಲವು ಕಾರಣಗಳಿಂದ 2003ರಲ್ಲಿ ತಡವಾಗಿ ಎಸ್​ಟಿಎಸ್-107 ಮಿಷನ್ ಪ್ರಾರಂಭವಾಯಿತು. 16 ದಿನಗಳ ಹಾರಾಟದಲ್ಲಿ ಒಟ್ಟು ಏಳು ಜನರ ತಂಡ 80ಕ್ಕೂ ಹೆಚ್ಚು ಪ್ರಯೋಗ ನಡೆಸಿ ಇನ್ನೇನು ಭೂಮಿಯ ಮೇಲಿರುವ ಕೆನಡಿ ಸ್ಪೇಸ್ ಸೆಂಟರ್ ತಲುಪಬೇಕು ಅನ್ನುವಷ್ಟರಲ್ಲಿ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿ ಕಲ್ಪನಾ ಆಕಾಶದಲ್ಲಿರುವ ನಕ್ಷತ್ರಗಳ ಸಾಲಿಗೆ ಸೇರಿದರು.
ಏನೇ ಹೇಳಿ, ಇಂದಿಗೂ ಭಾರತ ಮಾತ್ರವಲ್ಲದೆ ಇಡೀ ವಿಶ್ವದ ಯಶಸ್ವಿ ಸಾಹಸಿ ಮಹಿಳೆಯರ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ ಕಲ್ಪನಾ. ಭಾರತೀಯರಿಗಷ್ಟೇ ಅಲ್ಲ, ವಿಶ್ವಕ್ಕೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...