ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ತಂಡ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದು ಜೂನ್ 18-22ರವರೆಗೆ ನ್ಯೂಜಿಲೆಂಡ್ ವಿರುದ್ಧ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನಾಡಲಿದೆ. ಇದಾದ ಬಳಿಕ ಕೊಹ್ಲಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್‌ನಲ್ಲಿಯೇ ಬೀಡುಬಿಡಲಿದ್ದು ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ತಂಡ ಇಂಗ್ಲೆಂಡ್‌ನಲ್ಲಿರುವಾಗಲೇ ಮತ್ತೊಂದು ಭಾರತ ತಂಡ ಜುಲೈ ತಿಂಗಳಿನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು ಸೀಮಿತ ಓವರ್‌ಗಳ ಸರಣಿಯನ್ನಾಡಲಿದೆ. ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ 3 ಏಕದಿನ ಹಾಗೂ 3 ಟ್ವೆಂಟಿ ಪಂದ್ಯಗಳ ಸರಣಿಗಳು ನಡೆಯಲಿವೆ.
ಜುಲೈ 13, 16 ಹಾಗೂ 18ರಂದು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ 3 ಏಕದಿನ ಪಂದ್ಯಗಳು ನಡೆಯಲಿದ್ದು, ಜುಲೈ 21, 23 ಹಾಗೂ 25ರಂದು 3 ಟಿ ಟ್ವೆಂಟಿ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್ ಇಂಡಿಯಾ ಪಡೆದುಕೊಂಡಿದ್ದು ಸೋನಿ ಟೆನ್ 1, ಸೋನಿ ಟೆನ್ 3, ಸೋನಿ ಟೆನ್ 4 ಹಾಗೂ ಸೋನಿ ಸಿಕ್ಸ್ ಚಾನೆಲ್‌ಗಳಲ್ಲಿ ಪಂದ್ಯಗಳ ನೇರಪ್ರಸಾರವನ್ನು ಮಾಡಲಿದೆ.