ಭೀಕರ ಅಪಘಾತ: ಕಂಟೇನರ್ ಬಿದ್ದು ಕಾರು ಅಪ್ಪಚ್ಚಿ – ಇಬ್ಬರು ಮಕ್ಕಳು ಸೇರಿ 6 ಮಂದಿ ಸಾವು
ನೆಲಮಂಗಲ: ಡಿವೈಡರ್ ಮೇಲೆ ಹತ್ತಿದ ಕಂಟೈನರ್ ಲಾರಿ, ಕಾರಿನ ಮೇಲೆ ಉರುಳಿ ಬಿದ್ದು 6 ಜನ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ತಾಳೇಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಾರಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.
ಅಪಘಾತದ ವೇಳೆ ಕಂಟೇನರ್ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರು ಸಂಪೂರ್ಣ ಅಪ್ಪಚ್ಚಿಯಾಗಿತ್ತು. ಇದರಿಂದ ಕಾರು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು. ಇದರಿಂದ ತುಮಕೂರು ರಸ್ತೆಯಲ್ಲಿ ಸುಮಾರು 10 ಕಿಮೀ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಸದ್ಯ ನೆಲಮಂಗಲ ಪೊಲೀಸರು ಹಾಗೂ SP ಸಿ.ಕೆ ಬಾಬಾ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾರಿನಲ್ಲಿದ್ದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.