ಭೀಮರಾವ್ ಮುರಗೋಡ್ ಇನ್ನಿಲ್ಲ
ಭಾರತೀಯ ಚಿತ್ರಕಲಾ ಕ್ಷೇತ್ರದ ಮಾಣಿಕ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಭೀಮರಾವ್ ಮುರಗೋಡ್ ವಿಧಿವಶರಾಗಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್ನವರಾದ ಭೀಮರಾವ್ ಮುರಗೋಡ್ ಅವರು ವಿಶ್ವ ಚಿತ್ರಕಲಾ ಕ್ಷೇತ್ರದಲ್ಲಿ ಅಪೂರಪದ ವ್ಯಕ್ತಿಯಾಗಿದ್ದರು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ 75 ವರ್ಷ ವಯಸ್ಸಿನ ಭೀಮರಾವ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ದೆಹಲಿಯಲ್ಲಿ ವಾಸವಾಗಿದ್ದ ಭೀಮರಾವ್ ಮುರಗೋಡ್ ಭಾರತದ ಬಹುತೇಕ ಪ್ರಧಾನಮಂತ್ರಿಗಳು ಹಾಗೂ ರಾಷ್ಟ್ರಪತಿಗಳನ್ನ ಎದುರಿನಲ್ಲಿ ಕೂರಿಸಿಕೊಂಡು ಅವರ ಚಿತ್ರಗಳನ್ನ ರಚಿಸಿದ್ದರು. ಭಾರತ ದೇಶದ ದೊಡ್ಡ ದೊಡ್ಡ ಸಿನಿಮಾ ನಟರ ಭಾವಚಿತ್ರಗಳನ್ನ ಕ್ಷಣ ಮಾತ್ರದಲ್ಲಿ ರಚಿಸುತ್ತಿದ್ದರು.
ಭೀಮರಾವ್ ಮುರಗೋಡ್ ಅವರ ಚಿತ್ರಕಲಾ ನೈಪುಣ್ಯತೆ ಗೋಕಾಕ್ನಿಂದ ಆರಂಭವಾಗಿ ಅಮೆರಿಕಾ ದೇಶವನ್ನೂ ತಲುಪಿತ್ತು. ಯಾಕಂದ್ರೆ, 2000ರಲ್ಲಿ ಭಾರತಕ್ಕೆ ಆಗಮಿಸಿದ್ದ ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಕಲಾಕೃತಿಯನ್ನ ಭೀಮ್ರಾವ್ ರಚಿಸಿದ್ದರು. 1978ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಂದಿನ ಅಮೆರಿಕಾ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಕೃತಿಯನ್ನೂ ಭೀಮರಾವ್ ರಚಿಸಿದ್ದರು. ಆ ಚಿತ್ರ ಕೃತಿಯನ್ನ ಅಂದಿನ ವಿದೇಶಾಂಗ ಸಚಿವರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರೇ ಜಿಮ್ಮಿ ಕಾರ್ಟರ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇನ್ನು ಮದರ್ ಥೆರೇಸಾ, ಪೋಪ್ ಜಾನ್ ಪೌಲ್-2, ಇಂದಿರಾ ಗಾಂಧಿ, ಪಂಡಿತ್ ರವಿಶಂಕರ್, ಅರುಣಾ ಅಸಫ್ ಅಲಿ, ರಾಜಾ ರಾಮಣ್ಣ, ಎಂ.ಎಫ್ ಹುಸೇನ್ ಹೀಗೆ 300ಕ್ಕೂ ಹೆಚ್ಚು ಖ್ಯಾತನಾಮರ ಚಿತ್ರ ಕೃತಿಗಳನ್ನ ಭೀಮರಾವ್ ಮುರಗೋಡ್ ಅವರು ರಚಿಸಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ಭೀಮರಾವ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳು ಸಂದಿವೆ. 75 ವರ್ಷದ ಭೀಮರಾವ್ ಅವರು ಇಬ್ಬರು ಪುತ್ರರಾದ ಸ್ವರೂಪ್ ಮುರಗೋಡ್, ಸಾಮ್ರಾಟ್ ಗೌತಮ್ ಹಾಗೂ ಪುತ್ರಿ ಮೊನಾಲಿಸಾ ವಿನಯ್ ಮತ್ತು ಪತ್ನಿ ಶಾಲಿನಿ ಮುರಗೋಡ್ ಅವರನ್ನು ಅಗಲಿದ್ದಾರೆ.