ರಾಜ್ಯದಲ್ಲಿ ಚುನಾವಣೆ ಕಾವು ಮುಗಿದಿದೆ. ಆದ್ರೆ ಮೇ 23ರ ಫಲಿತಾಂಶದ ಮೇಲೆ ಎಲ್ಲಾ ರಾಜಕೀಯ ಪಕ್ಷಗಳು ಉಸಿರು ಬಿಗಿ ಹಿಡಿದು ಕಾಯುತ್ತಿವೆ. ಅದ್ರಲ್ಲೂ ಈ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದತ್ತ ಇಡೀ ದೇಶದ ಚಿತ್ತ ನೆಟ್ಟಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದು, ಜೆಡಿಎಸ್ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರ ಹಾಕ್ತಿದ್ದಾರೆ.
ಇಂತಹ ಸಂದರ್ಭದಲ್ಲೇ ಒಂದು ವೇಳೆ ಚುನಾವಣೆ ಫಲಿತಾಂಶ ಜೆಡಿಎಸ್‍ಗೆ ವ್ಯತಿರಿಕ್ತವಾಗಿ ಬಂದ್ರೆ ನಿಖಿಲ್ ಅವರನ್ನು ಸಚಿವರನ್ನಾಗಿ ಮಾಡಲೇಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಮಂಡ್ಯ ಕಾಂಗ್ರೆಸ್ ನ ಸ್ಥಳೀಯ ನಾಯಕರು ಲೋಕಸಭಾ ಚುನಾವಣೆಯಲ್ಲಿ ಕೈಕೊಟ್ಟ ಹಿನ್ನೆಲೆಯಲ್ಲಿ ನಿಖಿಲ್ ಗೆ ಹಿನ್ನೆಡೆಯಾದ್ರೆ, ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿಸುವ ಮೂಲಕ ಸಕ್ರಿಯ ರಾಜಕಾರಣದಲ್ಲಿರುವಂತೆ ಮಾಡಬೇಕು ಎಂದು ಮಂಡ್ಯದ ಜೆಡಿಎಸ್ ನಾಯಕರು ಒತ್ತಾಯಿಸಿದ್ದಾರೆ.ಈ ಚುನಾವಣೆಯಲ್ಲಿ ನಿಖಿಲ್ ಗೆ ಹಿನ್ನಡೆಯಾದ್ರೂ ಅದು ತಾತ್ಕಾಲಿಕ. ಹೀಗಾಗಿ ಅವರು ಮಂಡ್ಯದಲ್ಲಿ ಸಕ್ರಿಯವಾಗಿರಲು ರಾಜಕೀಯ ಸ್ಥಾನಮಾನ ನೀಡಬೇಕು ಎಂಬುದು ಸ್ಥಳೀಯ ಜೆಡಿಎಸ್ ನಾಯಕರ ವಾದ.