ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಒಂದೇ ದಿನ ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿ, ಕುಟುಂಬ ಹಾಗೂ ಗ್ರಾಮಸ್ಥರನ್ನು ಶೋಕದಲ್ಲಿ ಮುಳುಗಿಸಿದ್ದಾರೆ.
ಮೃತ ದಂಪತಿಗಳು ಬೂಕನಕೆರೆಯ ನಿಂಗರಾಜ ನಾಯ್ಕ (65) ಹಾಗೂ ಅವರ ಪತ್ನಿ ಗೌರಮ್ಮ (50) ಎಂದು ಗುರುತಿಸಲಾಗಿದೆ. ಗೌರಮ್ಮ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ನೆನ್ನೆ (ಮಂಗಳವಾರ) ಸಾವನ್ನಪ್ಪಿದ್ದರು. ಪತ್ನಿಯ ಅಂತ್ಯಸಂಸ್ಕಾರದ ಸಿದ್ಧತೆ ನಡೆಯುತ್ತಿದ್ದ ವೇಳೆ, ದುಃಖ ತಾಳಲಾರದೆ ನಿಂಗರಾಜ ನಾಯ್ಕ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಸುಮಾರು 46 ವರ್ಷಗಳಿಂದ ಸುಖದ ದಾಂಪತ್ಯ ಜೀವನ ನಡೆಸುತ್ತಿದ್ದ ಈ ದಂಪತಿಗಳು ಸಾವಿನಲ್ಲೂ ಒಂದಾಗಿ ಎಲ್ಲರ ಹೃದಯ ಮುಟ್ಟಿದ್ದಾರೆ. ಒಂದೇ ದಿನ ತಂದೆ-ತಾಯಿ ಕಳೆದುಕೊಂಡು ಇಬ್ಬರು ಪುತ್ರರು ತೀವ್ರ ಶೋಕದಲ್ಲಿ ಮುಳುಗಿದ್ದಾರೆ. ದಂಪತಿಯ ಸಾವಿನಿಂದ ಬೂಕನಕೆರೆ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.






