ಮಗನ ಮದುವೆಗೆ ನಿಮ್ಮನ್ನೆಲ್ಲಾ ಆಹ್ವಾನಿಸಿದ್ದಾರೆ ಕುಮಾರಸ್ವಾಮಿ..! ಮಾಜಿ ಸಿಎಂ ಪತ್ರ ನೋಡಿ

Date:

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ವಿವಾಹ ಏಪ್ರಿಲ್ 17 ರಂದು ನಡೆಯಲಿದೆ. ಮಗನ ಮದುವೆಗೆ ಕುಮಾರಸ್ವಾಮಿ ನಾಡಿನ ಜನತೆಗೆ ಪತ್ರ ಮುಖೇನ ಆಹ್ವಾನಿಸಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ.

ನನ್ನ ಪ್ರೀತಿಯ ಎಲ್ಲರಿಗೂ ಸಪ್ರೇಮ ನಮಸ್ತೆ,
ನಿಮಗೊಂದು ಪ್ರೀತಿಯ ಕರೆಯೋಲೆ,

ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ರಾಜಕೀಯವಾಗಿ ಹರಸಿ, ಆಶೀರ್ವದಿಸಿ, ರಾಜಕೀಯವಾಗಿ ಪುನರ್ಜನ್ಮ ನೀಡಿದವರು ನಾಡಿನ ಜನತೆ. ವಿಶೇಷವಾಗಿ ರಾಮನಗರ ಜಿಲ್ಲೆಯ ತಂದೆ-ತಾಯಂದಿರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು. ನಿಮಗೆಲ್ಲ ನಾನು ಮತ್ತು ನಮ್ಮ ಕುಟುಂಬ ಸದಾ ಋಣಿ. ರಾಜಕೀಯ ನನಗೊಂದು ಆಕಸ್ಮಿಕವಾಗಿ ಸಿಕ್ಕ ಬದುಕು. ಅದನ್ನು ನೀವು ಸಾಕಿ ಸಲಹುತ್ತಾ ಬಂದಿರುವ ನಿಮ್ಮಗಳ ಪ್ರೀತಿ ಸದಾ ಕೃತಜ್ಞತೆಯಿಂದ ಸ್ಮರಿಸುವಂತದ್ದು. ಈ ನಾಡಿನ ಜನರಿಂದ ಪಡೆದ ಅಧಿಕಾರ, ಗೌರವಗಳನ್ನು ನಿಮಗಾಗಿಯೇ ಸಮರ್ಪಿಸುತ್ತಾ ಬಂದಿದ್ದೇನೆ. ಅದರ ಹಕ್ಕು ರಾಜರು ನೀವೇ ಆಗಿರುತ್ತೀರಾ.

ರಾಜಕೀಯ ಬದುಕಿನಲ್ಲಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಸೌಭಾಗ್ಯ ನಾಡಿನ ಜನತೆಯ ಮನೋಭಿಲಾಷೆಯಂತೆ ನನಗೆ ದಕ್ಕಿದ್ದು ನಿಮ್ಮಗಳ ಆಶೀರ್ವಾದದ ಫಲ. ಮುಖ್ಯಮಂತ್ರಿಯಾಗಿದ್ದು ಕೊಂಡು ಸಾಮಾನ್ಯನಂತೆ ಬದುಕುವುದನ್ನು ಮರೆಯಲಿಲ್ಲ. ಅಸಹಾಯಕರು ಮತ್ತು ಬಡವರ ಬದುಕಿನ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆತ್ಮಸಾಕ್ಷಿಯಂತೆ ನಡೆದುಕೊಂಡಿದ್ದೇನೆ. ಇದನ್ನು ನನ್ನ ಆತ್ಮಬಲವೂ ದೌರ್ಬಲ್ಯವೂ ಎಂದು ಭಾವಿಸುವಲ್ಲಿ ಹಿಂಜರಿಕೆ ಇಲ್ಲ. ತನ್ನಂತೆಯೇ ಇರುವ ಮನುಷ್ಯರು ಕಷ್ಟ ಕೋಟಲೆಗಳಿಂದ ಕೊರಗುವುದ ಕಂಡಾಗ ನನ್ನ ಕರುಳು ಮಿಸುಕಾಡುತ್ತದೆ. ಹೀಗಾಗಿಯೇ ನನ್ನ ಪದವಿ, ಸ್ಥಾನ-ಮಾನ, ಸಂದರ್ಭಗಳ ಲೆಕ್ಕಿಸದೆ ಮತ್ತೆ ಮತ್ತೆ ನನ್ನ ಕಣ್ಣುಗಳು ನೀರಾಗಿ ಬಿಡುತ್ತವೆ. ಜನರಿಗಾಗಿ ಮಿಡಿದ ನನ್ನ ಪಾಲಿನ ಕರ್ತವ್ಯದಲ್ಲಿ ಎಷ್ಟು ಸಫಲ, ಎಷ್ಟು ವಿಫಲ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.
ಎರಡು ಸಲವೂ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದರಿಂದ ನನ್ನ ಹೆಬ್ಬಯಕೆಯಂತೆ ಜನಸಾಮಾನ್ಯನ ದುಃಖ ದುಮ್ಮಾನಗಳಿಗೆ ಗರಿಷ್ಠ ಮಟ್ಟದಲ್ಲಿ ಸ್ಪಂದಿಸಲು ಆಗಲಿಲ್ಲವೆಂಬ ನೋವು ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾದ ನನ್ನನ್ನು ಈಗಲೂ ಕಾಡುತ್ತಿದೆ. ನನ್ನನ್ನು ಕಂಡರೆ ಅದ್ಯಾಕೋ ಪಕ್ಷಾತೀತವಾಗಿ ಜನಸಾಮಾನ್ಯರು ಬಲು ಇಷ್ಟಪಡುತ್ತಾರೆ. ಪ್ರೀತಿ ಎಂಬುದನ್ನು ದಕ್ಕಿಸಿಕೊಳ್ಳಲು ಪ್ರೀತಿಯನ್ನಷ್ಟೇ ಧರಿಸಿದಾಗ ಮಾತ್ರ ಸಾಧ್ಯ. ಕರುಣೆ ಸ್ನೇಹದ ಮನೋಗತವೇ ನಾನು ಸಾಮಾನ್ಯನೊಳಗೆ ಸಾಮಾನ್ಯನಂತೆ ಬದುಕಲು ಸಾಧ್ಯವಾಯಿತೇನೋ ಎಂಬ ತೃಪ್ತಿ ಇದೆ. ಈ ಬದುಕೆ ನನಗಿಷ್ಟ.
ಈ ನಾಡಿನ ನಿಮ್ಮೆಲ್ಲರ ಪ್ರೀತಿಯನ್ನು ಕಣ್ತುಂಬಿಕೊಳ್ಳಲು, ಅದರೊಳಗೆ ಮಿಂದು ಮಗುವಾಗಲು ಅಪೂರ್ವವಾದ ಸಂದರ್ಭವೊಂದು ಕೂಡಿ ಬಂದಿದೆ. ಏಪ್ರಿಲ್ 17 ರಂದು ನನ್ನ ಮಗನ ವಿವಾಹ ರಾಮನಗರದಲ್ಲಿ ನಡೆಯಲಿದೆ. ಇದು ನಿಮ್ಮ’ಕುಮಾರಣ್ಣ’ನ ಮನೆಯ ಸಂಭ್ರಮ. ಈ ಸಮಾರಂಭದಲ್ಲಿ ನೀವಿದ್ದು, ನನ್ನ ಮಗ-ಸೊಸೆಯನ್ನು ಹರಸಿದರೆ, ನಿಮ್ಮ ಆ ಪ್ರೀತಿ ನನ್ನ ಹೃದಯವನ್ನು ಇನ್ನಷ್ಟು ಚೈತನ್ಯಪೂರ್ಣಗೊಳಿಸಲಿದೆ. ಇದನ್ನು ವೈಯುಕ್ತಿಕ ಆಮಂತ್ರಣ ಎಂದು ಪರಿಭಾವಿಸಿ, ನೀವು ಮತ್ತು ನಿಮ್ಮ ಕುಟುಂಬದವರು ಬರಲೇಬೇಕು. ಜತೆಯಲ್ಲೇ ಕೂತು ಊಟ ಮಾಡೋಣ. ಇದಕ್ಕಿಂತ ದೊಡ್ಡ ಸೌಭಾಗ್ಯ ನನಗೆ ಸಿಗಲ್ಲ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ನಿಮಗಾಗಿಯೇ ಕಾಯುತ್ತಿರುತ್ತೇನೆ. ನಿಮ್ಮ ಮನೆ ಮಗ, ಹೆಚ್.ಡಿ.ಕುಮಾರಸ್ವಾಮಿ

Share post:

Subscribe

spot_imgspot_img

Popular

More like this
Related

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ ತಾತ್ಕಾಲಿಕ...

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...