ಅವನ ಅಕ್ಕ-ಬಾವ ನೋಡಿದ ಹುಡುಗಿ ಮಾಜಿ ಪ್ರೇಯಸಿಯ ತಂಗಿ..!

1
772

ದಿವಿನ್‍ಗೆ ಬೇಗ ಮದುವೆ ಮಾಡಿ ಮನೆಗೆ ಮುದ್ದಾದ ಸೊಸೆ ತರುವ ಗಡಿಬಿಡಿ ಅಪ್ಪ-ಅಮ್ಮನಿಗೆ. ಅವರು ನೋಡಿದ ಮೂರ್ನಾಲ್ಕು ಹುಡುಗಿಯರನ್ನು ಒಪ್ಪದೇ ಮದುವೆಗೆ ನಿರಾಕರಿಸಿದ್ದ ದಿವಿನ್. ಅವನಿಗೆ ಮದುವೆ ಇಷ್ಟವಿರಲಿಲ್ಲ…! ದೂರಾದ ಪ್ರೇಯಸಿ ಮತ್ತೆ ಬಂದೇ ಬರುತಾಳೆ ಎಂದು ಕಾಯುತ್ತಿದ್ದ..!

ಹೆಚ್ಚು ಕಡಿಮೆ 2 ವರ್ಷಗಳು ಉರುಳಿದವು…ಅವಳು ಬರಲಿಲ್ಲ…ಫೋನಿಗೂ ಸಿಗಲಿಲ್ಲ… ಇವನು ಇಂಥಾ ಭಗ್ನಪ್ರೇಮಿ ಅಂತ ಮನೆಯಲ್ಲಿ ಯಾರಿಗೂ ಗೊತ್ತಿರ್ಲಿಲ್ಲ. ಹೀಗಿರುವಾಗ ಅವನ ಅಕ್ಕ-ಬಾವ ‘ಒಂದು ಹುಡುಗಿಯನ್ನು ನೋಡಿದ್ದೀವಿ, ಚೆನ್ನಾಗಿದ್ದಾಳೆ… ಅವನನ್ನು ಕೇಳ್ತಾ ಕುಳಿತುಕೊಂಡ್ರೆ ಏನೂ ಆಗಲ್ಲ..! ಮದುವೆಗೆ ನಾವು ಒಪ್ಪಿಸ್ತೀವಿ, ನೀವು ತಯಾರಾಗಿ’ ಎಂದು ಅಪ್ಪ-ಅಮ್ಮನಿಗೆ ಹೇಳ್ತಾರೆ.

ಅವಳು ಧನುಶ್ರೀ..ದಿವಿನ್ ಅಪ್ಪ-ಅಮ್ಮನಿಗೂ  ಇಷ್ಟವಾಗ್ತಾಳೆ…ಅವಳಿಗೆ ಮತ್ತು ಅವಳ ಅಪ್ಪ-ಅಮ್ಮನಿಗೆ ದಿವಿನ್ ಫೋಟೋ ತೋರಿಸ್ತಾರೆ..ಅವರಿಗೂ ದಿವಿನ್ ಇಷ್ಟವಾಗ್ತಾನೆ..! ಹಾಗಂತ ಅವತ್ತೇ ಮದುವೆ ಮಾತುಕತೆ ಆಡೋಕೆ ಆಗುತ್ತಾ..ಇಲ್ಲ. ಧನುಶ್ರೀಯ ಅಕ್ಕ ಅನುಶ್ರೀ ಮತ್ತು ಬಾವ ಕಾರ್ತಿಕ್ ಕೂಡ ಒಪ್ಪಬೇಕಲ್ಲಾ..?
ಧನು, ಅನುಶ್ರೀಗೆ ದಿವಿನ್ ಫೋಟೋ ವಾಟ್ಸಪ್ ಮಾಡಿದ್ಲು..! ನನಗೆ ನೋಡಿದ ಹುಡುಗ ಅನ್ನೋಕು ಇವಳಿಗೆ ನಾಚಿಕೆ..! ಅಲ್ಲಿ ಅನುಗೆ ಶಾಕ್..! ಸ್ವಲ್ಪ ಹೊತ್ತಿಗೆ ಅನುಗೆ ಅಮ್ಮಾ ಕಾಲ್ ಮಾಡಿದ್ರು, ಧನು ಕಳುಹಿಸಿದ ಹುಡುಗನ ಫೋಟೋ ನೋಡಿದ್ಯಾ..? ಕಾರ್ತಿಕ್‍ಗೂ ತೋರಿಸು.. ಹುಡ್ಗ ಚೆನ್ನಾಗಿದ್ದಾನೆ ಅಲ್ವಾ..? ಧನುನ ಅವನಿಗೆ ಕೊಟ್ಟು ಮದುವೆ ಮಾಡೋಣ ಅಂತ ಇದ್ದೀವಿ..ನಿನ್ನ ಮತ್ತು ಕಾರ್ತಿಕ್‍ನ ಕೇಳಿ ಹೇಳ್ತೀವಿ ಅಂತ ಅವರ ಮನೇಲಿ ಹೇಳಿದ್ದೀವಿ..! ಧನುಗೂ ಹುಡುಗ ಇಷ್ಟ ಆಗಿದ್ದಾನೆ ಅಂದ್ರು..! ಅವರು ಇಷ್ಟೆಲ್ಲಾ ಮಾತಾಡ್ತಾ ಇದ್ರೂ ಅನು ಮಾತ್ರ ಏನೂ ಉತ್ತರಿಸಲಿಲ್ಲ..! ‘ಏನೂ, ಬೇಗ ಕಾರ್ತಿಕ್‍ಗೆ ತೋರಿಸಿ ನಮಗೆ ಹೇಳು..’ಅಂತ ಮತ್ತೆ ಅತ್ತಿಂದ ಅಮ್ಮ ಗಟ್ಟಿಯಾಗಿ ಹೇಳಿದಾಗ..ಸರಿ ಅಮ್ಮಾ…ಓಕೆ ಅಂದಳು..! ಬಳಿಕ ಮಾತು ಬದಲಾಯಿಸಿದಳು..


ಮಾರನೇ ದಿನ, ಅಪ್ಪ (ಧನು-ಅನು ಅಪ್ಪ) ಅಳಿಯ ಕಾರ್ತಿಕ್‍ಗೆ ಫೋನ್ ಮಾಡಿದ್ರು, ‘ಕಾರ್ತಿಕ್, ನಿನ್ನೆ ಧನು ಅನು ವಾಟ್ಸಪ್‍ಗೆ ಒಬ್ಬ ಹುಡುಗನ ಫೋಟೋ ಕಳುಹಿಸಿದ್ದಾಳೆ. ನೀವು ನೋಡಿದ್ರಾ..? ಹುಡುಗ ಚೆನ್ನಾಗಿ ಇದ್ದಾನೆ ಅಲ್ವಾ..? ಧನುಗೆ ಮದುವೆ ಮಾಡೋಣ ಅಂತ ಅಂದ್ರು..! ಕಾರ್ತಿಕ್, ‘ಮಾವ..ಯಾವ ಫೋಟೋ..ತಡೀರಿ…ನನಗೆ ಅವಳು ಫೋಟೋ ತೋರಿಸಿಲ್ಲ. ನೋಡ್ತೀನಿ, ನಿಮಗೆಲ್ಲಾ ಓಕೆ ಆದ್ರೆ ಸಾಕು ಮಾವ ಅಂದ.
ಸ್ವಲ್ಪ ಹೊತ್ತಿಗೆ ಅನು ಪೂಜೆ ಮುಗಿಸಿಕೊಂಡು ಬಂದ್ಲು…ಕಾರ್ತಿಕ್ ಕೇಳಿದ.. ‘ನಿನ್ನೆ, ಧನು ನಿನಗೆ ಒಬ್ಬ ಹುಡುಗನ ಫೋಟೋ ಕಳುಹಿಸಿದ್ದಾಳಂತೆ ಅಲ್ವಾ..? ತೋರಿಸೋಕೆ ಮರೆತಿ ಅನ್ಸುತ್ತೆ..ಮಾವ ಫೋನ್ ಮಾಡಿದ್ರು..!
ಕಾರ್ತಿಕ್ ಕೇಳಿದ್ದಷ್ಟೇ..ಅನು ಮೈಮೇಲೆ ಗಣ ಬಂತು..ಮೊಬೈಲ್‍ನ ಕಾರ್ತಿಕ್ ಕೈಗೆ ನೀಡಿ ಗೊಣಗುಟ್ಟ ತೊಡಗಿದ್ಲು..! ನಿನಗೇನೆ ಆಯ್ತು… ನಾನು ಕೇಳಿದ್ದೇ ತಪ್ಪಾಯ್ತಾ..? ಅಂದ ಕಾರ್ತಿಕ್. ಇವಳಿಗೆ (ಅನುಗೆ) ಹೇಳೋಕಾಗಲ್ಲ.. ಬಿಡಕ್ಕಾಗಲ್ಲ..! ನಮ್ಮನ್ನು ಕೇಳದೇ ಹುಡುಗನ್ನ ನೋಡಿದ್ದಾರೆ.. ಮದುವೆನೂ ಮಾಡ್ಲಿ ಬಿಡಿ ಎಂದು ಪ್ಲೇಟ್ ಚೇಂಜ್ ಮಾಡಿ ರೇಗಾಡ ತೊಡಗಿದ್ಲು..!


ಆಗ ಕಾರ್ತಿಕ್, ಹೇ.. ನಿನಗೆ ತಲೆಗಿಲೆ ಕೆಟ್ಟಿದ್ಯಾ..? ಹುಡುಗನ ಅಕ್ಕ-ಬಾವನೇ ಅವರ ತಂದೆ-ತಾಯಿನ ಕರ್ಕೊಂಡು ಬಂದಿದ್ರಂತೆ. ಧನುಗೂ ಇಷ್ಟವಾಗಿದ್ದಾನೆ. ಆಗಲಿ ಬಿಡು…ನನಗಂತೂ ಹುಡುಗ ಇಷ್ಟ ಆದ.. ನಿನ್ನ ಯಾರ್ ಕೇಳ್ತಾರೆ…ಆದಷ್ಟು ಬೇಗ ಮದುವೆ ಮುಗಿಸೋಣ ಅಂದು ನಕ್ಕ..! ಮಾವನಿಗೆ ಫೋನ್ ಮಾಡಿ ಇಂಥಾ ಹುಡುಗನಾ ಯಾರ್ ತಾನೆ ಒಪ್ಪಲ್ಲ ಮಾವ…ಒಳ್ಳೆಯ ಕಂಪನಿಯಲ್ಲಿ ಕೆಲಸ ಕೂಡ ಮಾಡ್ತಿದ್ದಾನೆ.. ಮನೆ ಕಡೆ ಜಮೀನ್ ಕೂಡ ಉಂಟು ಅಂದಿದ್ದೀರಿ… ಮುಂದುವರೆಸಿ.. ಬೇಗ ಮದುವೆ ಮಾಡೋಣ ಎಂದು ತಮ್ಮ ಒಪ್ಪಿಗೆನಾ ಸೂಚಿಸಿದ..!
ಇಷ್ಟೆಲ್ಲಾ ಆಗಿದ್ದು ಅತ್ತ ದಿವಿನ್ ಗೆ ಗೊತ್ತಿರಲಿಲ್ಲ. ಹುಡುಗಿ ಮನೆಯವರಿಂದ ಒಪ್ಪಿಗೆ ಬಂದ ಕೂಡಲೇ ದಿವಿನ್‍ನ ಅಕ್ಕ ನಾವು ನಿನಗೆ ನೋಡಿರೋ ಹುಡುಗಿ.. ಇವಳನ್ನು ಆಗಲ್ಲ ಅಂತ ಹೇಳ್ಬೇಡ…ಅವರ ಮನೆಯಲ್ಲಿ ಒಪ್ಪಿದ್ದಾರೆ ಎಂದು ಧನು ಫೋಟೋವನ್ನು ವಾಟ್ಸಪ್ ಮಾಡಿದ್ಲು..! ಅವಳ ಫೋಟೋ ನೋಡುತ್ತಿದ್ದಂತೆ ಇಷ್ಟವಾಯ್ತು…ಎಲ್ಲೋ ಒಂದು ಕಡೆ ಅನು ಹೋಲಿಕೆ ಇದೆ ಎಂದೆನಿಸಿದ್ರೂ ಅನು ತಂಗಿಯೇ ಎಂಬ ಅನುಮಾನ ಅವನಿಗೆ ಬರಲೇ ಇಲ್ಲ..! ಹಾಗಂತ ಕೂಡಲೇ ತನ್ನ ಒಪ್ಪಿಗೆ ನೀಡೋಕೆ ಸಾಧ್ಯವಿಲ್ಲವಲ್ಲ..? ನನ್ನ ಕೇಳ್ದೆ ಏಕೆ ನೋಡಿದ್ರಿ, ಹಾಗೆ ಹೀಗೆ ಅಂತ ರೇಗಾಗಿಡದ ನಾಟಕ ಮಾಡಿದ..! ಅದಕ್ಕೆಲ್ಲಾ ಸೊಪ್ಪು ಹಾಕಲಿಲ್ಲ ಅಕ್ಕ…ಅವನು ಒಪ್ಪಿದ.. ಏನ್ ಬೇಕಾದ್ರು ಮಾಡಿ ಅಂದ..!


ವಾರದ ನಂತರ ಮಾತುಕತೆ…! ಧನುವನ್ನು ನೋಡಿ, ಇವಳನ್ನೂ ಒಪ್ಪದೇ ಇದ್ದಿದ್ರೆ…ನನಗೆ ಇಂಥಾ ಹುಡುಗಿ ಮತ್ತೆ ಸಿಕ್ತಿರ್ಲಿಲ್ಲ ಎಂದು ಕೊಂಡ..! ಮನೆ ಮಂದಿಯೆಲ್ಲಾ ಮಾತನಾಡಿಸಿದ್ರು…ಕಾರ್ತಿಕ್ ಪರಿಚಯವೂ ಆಯ್ತು… ಅಡುಗೆ ಮನೆಯಲ್ಲಿದ್ದ ಅನು ಆಚೆ ಬರಲಿಲ್ಲ..! ದಿವಿನ್ ಅಮ್ಮ ಕೇಳಿದ್ರು, ನಿಮ್ಮ ಹಿರಿಮಗಳು ಎಲ್ಲಿ, ಕಾಣ್ಲೇ ಇಲ್ಲ..!
ಅವಳೋ ಅಡುಗೆ ಮನೇಲಿ ಇದ್ದಾಳೆ..ಬರ್ತಾಳೆ ಅಂದ್ರು ಅನು/ಧನು ಅಮ್ಮ…ಕಾರ್ತಿಕ್ ಸೀದಾ ಅಡುಗೆ ಮನೆಗೆ ಹೋಗಿ, ನೀನು ಈ ಮೊಂಡು ಹಠ ಬಿಡು.. ಅತ್ತೆ ಮಾವಗೆ ಬೇಜಾರಾಗುತ್ತೆ..ಹುಡುಗನ ಕಡೆಯವರು ಏನ್ ಅನ್ಕೊಳ್ಳಲ್ಲ.. ಬಾ.. ಆಚೆ ಎಂದು ಗದರಿದಾಗ.. ಕೃತಕ ನಗುವಿನ ಮುಖ ಹೊತ್ತು ಆಚೆ ಬಂದಳು ಅನು..! ಆಗ ದಿವಿನ್‍ಗೆ ಶಾಕ್..!
ದಿವಿನ್‍ನ ನೋಡಿದ್ರೂ ನೋಡ್ದೆ ಇರುವಂತೆ ನಟಿಸಿದ ಅವಳು, ಸೀದಾ ಅವನ ಅಮ್ಮ-ಅಕ್ಕನ ಬಳಿ ಮಾತಾಡಿದ್ಲು..ಸಾರಿ, ಒಳಗಡೆ ಸ್ವಲ್ಪ ಕೆಲಸ ಇತ್ತು..ಅದ್ಕೆ ಈಗ ಬಂದೆ.. ಬೇಜಾರಾಗ್ಬೇಡಿ ಅಂತ ಮಾತಿಗಿಳಿದ್ಲು..! ಅವಳಿಗೆ ದಿವಿನ್ ಅಮ್ಮ-ಅಕ್ಕ ಇಷ್ಟವಾದ್ರು..! ದಿವಿನ್ ಕಡೆ ಮಾತ್ರ ನೋಡೋಕೆ ಆಗ್ತಿರ್ಲಿಲ್ಲ..!


ಮೂರು ದಿನದ ನಂತರ ಕಾರ್ತಿಕ್, ದಿವಿನ್‍ಗೆ ಫೋನ್ ಮಾಡಿದ..! ನಾಳೆ ಭಾನುವಾರ ಅಲ್ವಾ.. ಏನಿದೆ ಕೆಲಸ..! ಬನ್ನಿ ನಮ್ಮನೆಗೆ ಅಂತ ಆಮಂತ್ರಣವಿತ್ತ. ಇಬ್ಬರೂ ಇದ್ದಿದ್ದು ಬೆಂಗಳೂರಲ್ಲೇ..
ಕಾರ್ತಿಕ್-ಅನು ಮನೆ ಹೆಬ್ಬಾಳದಲ್ಲಿ.. ದಿವಿನ್ ಇರೋದು ಕತ್ರಿಗುಪ್ಪೆಯಲ್ಲಿ. ದಿವಿನ್‍ನನ್ನು ಕಾರ್ತಿಕ್ ಮನೆಗೆ ಕರೀತಾ ಇದ್ರೆ.. ಅನುಗೆ ಬೇಡ ಅಂತ ಹೇಳೋಕಾಗ್ತಿಲ್ಲ..! ದಿವಿನ್ ಇನ್ನೊಮ್ಮೆ ಬರ್ತೀನಿ ಅಂದ್ರೂ ಬಿಡಲಿಲ್ಲ..! ಕಾರ್ತಿಕ್ ಒತ್ತಾಯಕ್ಕೆ ಮಣಿದು ಮನೆಗೆ ಹೋದ..!
ಅಷ್ಟರಲ್ಲಿ ಪಕ್ಕದ ಮನೆಯ ಹುಡುಗ ಬಂದು ಬೆಲ್ ಮಾಡಿದ..! ಅನು ಬಾಗಿಲು ತೆರೆದಳು..! ಆಂಟಿ..ಆಂಟಿ..ಅಂಕಲ್ ಇದ್ದಾರ..? ತಾತಾ ಬಿದ್ದು ಕಾಲ್ ಪೆಟ್ಟು ಮಾಡಿಕೊಂಡಿದ್ದಾರೆ..! ಅಪ್ಪ ಮನೇಲಿ ಇಲ್ಲ. ಹಾಸ್ಪಿಟಲ್‍ಗೆ ಕರ್ಕೊಂಡು ಹೋಗ್ಬೇಕು ಅಂದ…ಕೂಡಲೇ ಕಾರ್ತಿಕ್ ಹೊರಟ..! ದಿವಿನ್ ನಾನೂ ಬರ್ತೀನಿ ಅಂದ. ಇಲ್ಲ, ದಿವಿನ್ ನೀವು ಇರಿ..ನಾನು ಬೇಗ ಬರ್ತೀನಿ ಎಂದು ಹೊರಟ ಕಾರ್ತಿಕ್.
ಅವನ ಜೊತೆ ಅನು ಮತ್ತು ದಿವಿನ್ ಕೂಡ ಮನೆಯಿಂದ ಆಚೆ ಬಂದರು. ತಾತನನ್ನು ಕಾರಿನಲ್ಲಿ ಹಾಕಿಕೊಂಡು ಕಾರ್ತಿಕ್ ಹೊರಟು ಹೋದ ಮೇಲೆ..ಅನು ಮನೆಯ ಒಳಗಡೆ ಹೊರಟಳು..! ದಿವಿನ್, ತನ್ನ ಬೈಕ್ ಬಳಿ ಹೋದ..! ಅವನನ್ನು ನೋಡಿದ ಅನು, ‘ಒಳಗೆ ಬಾ…ಹೋಗಬೇಡ’ ಅಂದ್ಲು..! ದಿವಿನ್ ಮನೆಯ ಒಳಗಡೆ ಹೋದ..! ಅನು ಜೋರಾಗಿ ಅಳಲಾರಂಭಿಸಿದ್ಲು..! ದಿವಿನ್ ಅವಳ ಕಣ್ಣೀರು ಹೊರೆಸುವ ಜಾಗದಲ್ಲಿರಲಿಲ್ಲ..!


ಅನು, ಅಳಬೇಡ..ಕ್ಷಮಿಸಿಬಿಡು..ಧನು ನಿನ್ನ ತಂಗಿ ಎಂದು ನನಗೆ ಗೊತ್ತಿರಲಿಲ್ಲ ಎಂದು ಮಾತು ಆರಂಭಿಸಿದ..! ನಾನಲ್ಲ, ನೀನು ನನ್ನ ಕ್ಷಮಿಸಬೇಕು ಅಂದ್ಲು ಅನು..!
ದಿವಿನ್ ಅವತ್ತು ನಮ್ಮ ಮನೇಲಿ ನನಗೆ ಹುಡುಗನಾ ನೋಡ್ತಾ ಇದ್ದಾರೆ.. ನೀನು ನಿಮ್ಮನೇಲಿ ಮಾತಾಡು ಅಂತ ನಾನು ಎಷ್ಟೇ ಹೇಳಿದ್ರು ನೀನು ಕೇಳಿಲ್ಲ..! ನೀನು ನಿಮ್ಮ ಮನೇಲಿ ಹೇಳಿ, ಅಪ್ಪ ಅಮ್ಮನ ಒಪ್ಪಿಸಿ ಕರ್ಕೊಂಡು ಬರ್ತೀಯ ಅಂತ ಅನ್ಕೊಂಡಿದ್ದೆ. ನನಗೆ ನಮ್ಮ ಮನೇಲಿ ಹೇಳುವ ಧೈರ್ಯವಿರಲಿಲ್ಲ..! ನೀನು ಕೆಲಸಕ್ಕೆ ಸೇರಿದಷ್ಟೇ.. ಇಷ್ಟು ಬೇಗ ನಾನು ಮದುವೆ ಆಗಲ್ಲ ಎಂದೆ..! ನನಗೆ ಆ ಕ್ಷಣದಲ್ಲಿ ಏನೂ ಮಾಡೋಕೆ ಆಗ್ಲಿಲ್ಲ ಎಂದು ಕಳೆದು ಹೋದ ದಿನಗಳನ್ನು ಮೆಲುಕು ಹಾಕಿದ್ಲು..!
ದಿವಿನ್ ಹೇಳಿದ.. ಅನು, ಋಣಾನುಬಂಧ.. ಏನೂ ಮಾಡಕ್ಕಾಗಲ್ಲ. ನೀನು ಆರಾಮಾಗಿರು.. ನಾನು-ನೀನು ಮಾಜಿ ಪ್ರೇಮಿಗಳು ಎಂದು ಎಲ್ಲೂ ಗೊತ್ತಾಗಲ್ಲ..! ನಿನ್ನ ತಂಗಿ ಧನುಗೆ ನಾನಲ್ಲದೆ ಬೇರೆ ಹುಡುಗನನ್ನು ನೋಡಿದ್ರೆ ನೀನು ಹೇಗಿರ್ತಿದ್ದಿಯೋ ಹಾಗೇ ಇದ್ದು ಬಿಡು ಎಂದ..ಇಬ್ಬರೂ ಒಬ್ಬರನೊಬ್ಬರು ಸಮಾಧಾನ ಪಡಿಸಿಕೊಂಡರು.
ಧನು ಮತ್ತು ದಿವಿನ್ ಎಂಗೇಜ್ಮೆಂಟ್ ಆಯ್ತು, ಮದುವೆಯೂ ಆಯ್ತು.. ಸುಖೀ ಸಂಸಾರ ಅವರದ್ದು.


ದಿವಿನ್ ಶಿವಮೊಗ್ಗದವನು.. ಅನು ಉಡುಪಿಯವಳು.. ಇಬ್ಬರ ಪರಿಚಯ ಮಂಗಳೂರು ವಿವಿಯಲ್ಲಿ ಬಿಎಸ್ಸಿ ಮಾಡುವಾಗ..ಪರಿಚಯ ಸ್ನೇಹವಾಗಿ, ಸ್ನೇಹ ಪೀತಿಯಾಗಿತ್ತು. ಬಳಿಕ ಇಬ್ಬರೂ ಎಂಬಿಎ ಮಾಡಿದ್ರು. ಪ್ರೇಮಿಗಳಾಗಿ ಹೆಚ್ಚು ಕಡಿಮೆ ನಾಲ್ಕು ವರ್ಷ ಆಗಿದ್ದರೂ ಫ್ಯಾಮಿಲಿಲಿ ಯಾರೆಲ್ಲಾ ಇದ್ದೀವಿ ಎಂದು ಹೇಳಿಕೊಂಡಿದ್ದರಷ್ಟೇ..ಅವನ ಫ್ಯಾಮಿಲಿಯನ್ನು ಇವಳು, ಇವಳ ಫ್ಯಾಮಿಲಿನಾ ಅವನು ನೋಡಿರಲಿಲ್ಲ..! ಎಂಬಿಎ ಮುಗಿದ ಬಳಿಕ ಅನು ಮಂಗಳೂರಲ್ಲೇ ಕೆಲಸ ಮಾಡ್ತೀನಿ..ಅಪ್ಪ ಅಮ್ಮನ ಜೊತೆ ಇರ್ತೀನಿ ಅಂದ್ಲು. ಕಾಲೇಜು ಒಂದರಲ್ಲಿ ಲೆಕ್ಚರರ್ ಆಗಿ ಸೇರಿದ್ಲು. ಉಡುಪಿಯಿಂದ ಡೈಲಿ ಅಪ್ ಅಂಡ್ ಡೌನ್ ಮಾಡ್ತಿದ್ಲು. ದಿವಿನ್ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ..!


ಮದುವೆ ಬಗ್ಗೆ ಮಾತಾಡು ಅಂದ್ರೆ ದಿವಿನ್ ಮಾತಾಡಿರಲಿಲ್ಲ. ಇವಳು ಪ್ರೀತಿ ವಿಷಯನಾ ಮನೇಲಿ ಹೇಳಲಿಲ್ಲ. ಎಷ್ಟು ಹೇಳಿದ್ರೂ ದಿವಿನ್ ಅರ್ಥ ಮಾಡಿಕೊಳ್ಳದೇ ಇರುವಾಗ ಜಗಳವಾಯ್ತು..ಅನಿವಾರ್ಯವಾಗಿ ಅನು ದೂರಾದಳು..! ಅವಳಿಗೆ ಇಷ್ಟು ಬೇಗ ಎಲ್ಲಿ ಮದ್ವೆ ಮಾಡ್ತಾರೆ..ಸುಮ್ನೆ ನನಗೆ ಗಡಿಬಿಡಿ ಮಾಡ್ತಿದ್ದಾಳೆ ಎಂದುಕೊಂಡಿದ್ದ ದಿವಿನ್. 15 ದಿನ ಆದರೂ ಅನು ಕಾಲ್ ಮಾಡ್ದೆ ಇದ್ದಾಗ.. ಇವನಿಗೆ ಟೆಕ್ಷನ್ ಶುರುವಾಯ್ತು..! ಫೇಸ್‍ಬುಕ್ ಡಿ ಆ್ಯಕ್ಟಿವೇಟ್ ಮಾಡಿದ್ಲು..! ವಾಟ್ಸಪ್ ಬ್ಲಾಕ್ ಮಾಡಿದ್ದಾಳೆ..! ಟೆಕ್ಸ್ಟ್ ಮೆಸೇಜ್‍ಗೆ ರಿಪ್ಲೇ ಇಲ್ಲ..!


ಫೋನ್ ಮಾಡಿದ.. ರಿಸೀವ್ ಮಾಡಿದ್ಲು.. ‘ಇನ್ನು ನಿನಗೆ ನನಗೆ ಸಂಬಂಧವಿಲ್ಲ. ನನಗೆ ಡಿಸ್ಟರ್ಬ್ ಮಾಡ್ಬೇಡ. ನಾನೇ ಫೋನ್ ಮಾಡಿ ಹೇಳೋಣ ಅಂತಿದ್ದೆ. ಇದೇ ನನ್ನ ನಿನ್ನ ನಡುವಿನ ಕೊನೆಯ ಮಾತು’ ಎಂದು ಕಾಲ್ ಕಟ್ ಮಾಡಿದ್ಲು..! ಮತ್ತೆ ದಿವಿನ್ ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು..! ಮತ್ತೆ ಬಂದೇ ಬರ್ತಾಳೆ..ನನ್ನ ಪ್ರೀತಿ ನಿಜ ಎಂದು ಕಾಯುತ್ತಿದ್ದ ದಿವಿನ್‍ಗೆ ಅನು ಸಿಕ್ಕಿದ್ದು ಎಲ್ಲಿ..? ಹೇಗೆ ಎನ್ನೋದು ನಿಮಗೆ ಈಗಾಗಲೇ ತಿಳಿದಿದೆ ಅಲ್ವಾ..?

 

1 COMMENT

LEAVE A REPLY

Please enter your comment!
Please enter your name here