ಬಿಗ್ ಬಾಸ್‌ನಲ್ಲಿ ನೀಡಿದ್ದ ಟಾಸ್ಕ್ ಗೆದ್ದು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮಗಳು ಚುಕ್ಕಿ ಬರೆದಿರುವ ಪತ್ರ ಓದುವ ಅವಕಾಶ ಸಿಕ್ಕಿದೆ. ಮಗಳ ಪತ್ರವನ್ನು ಓದಿ ಚಕ್ರವರ್ತಿ ಅವರು ತುಂಬ ಅತ್ತಿದ್ದಾರೆ, ಭಾವುಕರಾಗಿ ಕಿರುಚಾಡಿದ್ದಾರೆ. ಮನೆಯವರೆಲ್ಲರೂ ಚಕ್ರವರ್ತಿಗೆ ಸಾಂತ್ವನ ಹೇಳಿದ್ದಾರೆ.
“ಹಾಯ್ ಅಪ್ಪಾ, ನಾನು ನೀನು ಕಳೆದಿರುವ ಸಮಯ ತುಂಬ ಕಡಿಮೆ. ನಾನು ನಿನ್ನ ತುಂಬ ಮಿಸ್ ಮಾಡಿಕೊಳ್ತಿದ್ದೀನಿ. ನಿನ್ನ ಮುದ್ದಿನ ಮಗಳು ಚುಕ್ಕಿ” ಎಂದು ಚಕ್ರವರ್ತಿ ಚಂದ್ರಚೂಡ್ ಮಗಳು ಚುಕ್ಕಿ ಪತ್ರ ಬರೆದಿದ್ದಾರೆ. ಈ ಕುರಿತು ಪ್ರೋಮೋ ರಿಲೀಸ್ ಆಗಿದೆ. ಇಂದಿನ ಎಪಿಸೋಡ್‌ನಲ್ಲಿ ಚುಕ್ಕಿ ಬರೆದಿರುವ ಪತ್ರದ ಬಗ್ಗೆ ಸಂಪೂರ್ಣವಾಗಿ ಗೊತ್ತಾಗುವುದು.
ಎರಡು ಬಾರಿ ಮದುವೆಯಾಗಿರುವ ಚಕ್ರವರ್ತಿ ಚಂದ್ರಚೂಡ್ ಅವರು ವೈವಾಹಿಕ ಜೀವನದಲ್ಲಿ ಸೋತಿರುವುದಾಗಿ ಹೇಳಿಕೊಂಡಿದ್ದರು. ಇನ್ನು ಚಕ್ರವರ್ತಿ ಚಂದ್ರಚೂಡ್ ಹಾಗೂ ಅವರ ಮೊದಲ ಪತ್ನಿಗೆ ಮಗಳಿದ್ದಾಳೆ. ದಿವ್ಯಾ ಸುರೇಶ್ ನೋಡಿದರೆ ನನಗೆ ನನ್ನ ಮಗಳು ನೆನಪಾಗ್ತಾಳೆ ಅಂತ ಚಕ್ರವರ್ತಿ ಈ ಹಿಂದೆ ಹೇಳಿಕೊಂಡು ಭಾವುಕರಾಗಿದ್ದರು.
ಇನ್ನು ಯುಗಾದಿ ಹಬ್ಬದ ದಿನ ಎಲ್ಲರ ಸಂಭ್ರಮ ನೋಡಿ ನನ್ನ ಮಗಳು ಸೀರೆ ಉಡುವಷ್ಟು ಎತ್ತರ ಆಗಿದ್ದಾಳೆ. ಬಿಗ್ ಬಾಸ್ ಮನೆಯಿಂದ ಹೋದಕೂಡಲೇ ಸೀರೆ ಕೊಡಸ್ತೀನಿ ಅಂತ ಕೂಡ ಚಕ್ರವರ್ತಿ ಹೇಳಿದ್ದಾರೆ. ಒಟ್ಟಿನಲ್ಲಿ ಮನೆಯ ಸದಸ್ಯರ ಜೊತೆ ಮಗಳ ಕುರಿತು ಆಗಾಗ ಅವರು ಒಂದಷ್ಟು ವಿಷಯ ಹಂಚಿಕೊಳ್ಳುತ್ತಿರುತ್ತಾರೆ.
ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಭೇಟಿ ಕೊಟ್ಟಾಗಿನಿಂದ ಸದ್ದು-ಸುದ್ದಿ ಮಾಡುತ್ತಲೇ ಇದ್ದಾರೆ. ಅವರು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಂತೆ ಮನೆಯ ವಾತಾವರಣ ಬದಲಾಗಿದೆ. ಈ ವಿಚಾರ ಎಲ್ಲ ಸದಸ್ಯರ ಗಮನಕ್ಕೂ ಬಂದಿದೆ. ಇನ್ನು ಅವರು ನೀಡುವ ಸಲಹೆ ರಾಜೀವ್, ದಿವ್ಯಾ ಸುರೇಶ್ ಅವರಿಗೆ ಬೇಸರ ತಂದಿತ್ತು. ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್ ಮನೆಗೆ ಕಾಲಿಟ್ಟು 19 ದಿನಗಳು ಆಗಿವೆ, ಅವರು ಹೆಚ್ಚು ನಾಮಿನೇಟ್ ಆದರೂ ಕೂಡ ಮತಗಳಿಂದಾಗಿ ದೊಡ್ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.