ಮಗುವಿಗೆ ವಿಷ ನೀಡಿ ತಾನೂ ಸೇವಿಸಿ ತಾಯಿ ಆತ್ಮಹತ್ಯೆಗೆ ಯತ್ನ..!
ಬೆಂಗಳೂರು: ನಗರದ ತಿಗಳರಪಾಳ್ಯದಲ್ಲಿ ಮನನೊಂದು ತಾಯಿ ಟೀಗೆ ಇಲಿ ಪಾಷಾಣ ಬೆರೆಸಿ ತನ್ನ ಮಗುವಿಗೆ ನೀಡಿದ ಘಟನೆ ನಡೆದಿದೆ. ಬಳಿಕ ತಾನು ಕೂಡ ಅದೇ ಟೀ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಘಟನೆಯಲ್ಲಿ ಚಾರ್ವಿ ಎಂಬ ಮಗು ಸಾವಿಗೀಡಾಗಿದ್ದು, ತಾಯಿ ಚಂದ್ರಿಕಾ (24) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಂದ್ರಿಕಾ ಗಂಡ ಯೋಗೇಶ್ ಜೊತೆ ಆಗಾಗ ಜಗಳವಾಡುತ್ತಿದ್ದು, ಹಣಕಾಸು ಸಮಸ್ಯೆಗಳ ಮಧ್ಯೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಈ ಹಂತಕ್ಕೆ ತಲುಪಿದ್ದರೆಂದು ಶಂಕಿಸಲಾಗಿದೆ. ಗಂಡ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಘಟನೆ ನಡೆದ ನಂತರ ಚಂದ್ರಿಕಾ ಯೋಗೇಶ್ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ತಕ್ಷಣ ಮನೆಗೆ ಧಾವಿಸಿದ ಯೋಗೇಶ್ ಪತ್ನಿ ಮತ್ತು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ಮಗು ಮೃತಪಟ್ಟಿದ್ದು ತಾಯಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.