ಮಗು ಉಳಿಯದಿದ್ದರೂ, ಸಂಗ್ರಹವಾದ 48 ಲಕ್ಷ ರೂ. ಮರಳಿ ಸಮಾಜಕ್ಕೆ ನೀಡಿದ ತಂದೆ

Date:

ಆ ಮಗುವಿನ ಪ್ರಾಣ ಉಳಿಯಬೇಕಾದರೆ 16 ಕೋಟಿ ರೂಪಾಯಿಯ ಇಂಜೆಕ್ಷನ್ ಬೇಕಾಗಿತ್ತು. ದಾನಿಗಳ ಸಹಾಯದಿಂದ ಬರೋಬ್ಬರಿ 48 ಲಕ್ಷ ರೂಪಾಯಿವರೆಗೆ ಸಂಗ್ರಹವಾಗಿತ್ತು. 16 ಕೋಟಿ ರೂಪಾಯಿ ಜೋಡಿಸಲು ಹೆತ್ತವರು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ದುರದೃಷ್ಟವಶಾತ್ ಹೆತ್ತವರ ಹೋರಾಟದ ಮಧ್ಯದಲ್ಲೇ ಮಗು ಭಗವಂತನ ಪಾದ ಸೇರಿತು.

ಮಗುವಿನ ಉಸಿರು ನಿಂತರೂ ಈಗ ಮಗುವಿನ ಹೆಸರು ಶಾಶ್ವತವಾಗಿ ಇರುವಂತೆ ಹೆತ್ತವರು ಒಳ್ಳೆಯ ಕೈಂಕರ್ಯ ಮಾಡಿದ್ದಾರೆ. ಮಗುವಿನ ಪ್ರಾಣ ರಕ್ಷಣೆಗೆ ಸಮಾಜ ನೀಡಿದ ಹಣವನ್ನು ಮಗುವಿನ ಹೆತ್ತವರು ಮತ್ತೆ ಸಮಾಜಕ್ಕೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಇಂತಹದೊಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿರೋದು ನಮ್ಮ ರಾಜ್ಯದ ದೇವಾಲಯಗಳ ನಗರಿ ಉಡುಪಿ ಜಿಲ್ಲೆ. ಉಡುಪಿ ಜಿಲ್ಲೆಯ ಸಂದೀಪ್ ದಂಪತಿಯ ಎಳೆಯ ಮಗು ಮಿಥಾಂಶ್ ಜುಲೈ ತಿಂಗಳಿನಲ್ಲಿ ಜಗತ್ತಿನ ಅಪರೂಪದ ಖಾಯಿಲೆ ವಕ್ಕರಿಸಿತ್ತು. ಸ್ಪೈನಲ್ ಮಸ್ಕುಲರ್ ಅಟ್ರೋಫಿ ಎಂಬ ಮಾರಕ ಖಾಯಿಲೆ ಕ್ಷಣಕ್ಷಣಕ್ಕೂ ಮಗುವಿನ ಪ್ರಾಣ ಹಿಂಡುತಿತ್ತು.

ಬೆನ್ನು ಮೂಳೆಯ ಸ್ನಾಯು ಕ್ಷೀಣತೆಯಿಂದ ಮಗು ಜೀವನ್ಮರಣ ನಡುವೆ ಹೋರಾಟ ಮಾಡುತ್ತಿತ್ತು. ಮುದ್ದು ಮುಖದ, ಹಾಲು ಗೆನ್ನೆಯ ಪುಟ್ಟ ಕಂದಮ್ಮ ಮಿಥಾಂಶ್‌ನನ್ನು ಬದುಕುಳಿಯುವಂತೆ ಮಾಡುವುದೂ ದೊಡ್ಡ ಸಾಹಸವಾಗಿತ್ತು. ಯಾಕೆಂದರೆ ಮಿಥಾಂಶ್‌ಗೆ ಬದುಕಿ ಉಳಿಯಬೇಕಾದರೆ 16 ಕೋಟಿ ರೂಪಾಯಿಯ ಇಂಜೆಕ್ಷನ್ ಬೇಕಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ನಡೆಯುತು. 16 ಕೋಟಿ ಎಂಬ ಬೃಹತ್ ಮೊತ್ತವನ್ನು ತಲುಪಲು ದಾನಿಗಳು ಕೈಲಾದ ಸಹಾಯ ಮಾಡಿದರು. ಜನರ ನಿಸ್ವಾರ್ಥ ಸಹಾಯದಿಂದ ಕೆಲವೇ ದಿನಗಳಲ್ಲಿ 48 ಲಕ್ಷ ರೂಪಾಯಿ ಜಮಾವಣೆಯಾಗಿದೆ. ಮಗುವನ್ನು ಉಳಿಸಲು ಸಮಾಜ ಶತ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಭಗವಂತ ಮಾತ್ರ ಸದ್ದಿಲ್ಲದೆ ಮಿಥಾಂಶ್‌ನನ್ನು ತನ್ನತ್ತ ಕರೆದುಕೊಂಡಿದ್ದ. ಜನರ ಸಾಂಘಿಕ ಹೋರಾಟದ ನಡುವಲ್ಲೇ ಮಿಥಾಂಶ್ ಚಿರನಿದ್ರೆಗೆ ಜಾರಿ ಹೋಗಿದ್ದ.

 

ಮಗು ಮಿಥಾಂಶ್ ನಡುವಲ್ಲೇ ತೀರಿ ಹೋದರೂ ಮಗುವಿನ ಚಿಕಿತ್ಸೆಗೆ ಸಂಗ್ರಹವಾದ 48 ಲಕ್ಷ ರೂಪಾಯಿ ಎಲ್ಲಿ ಹೋಯಿತು ಎಂಬ ಮಾತು ಹಲವರಿಂದ ಕೇಳಲಾರಂಭಿಸಿತು. ಹಣ ಅಂದರೆ ಹೆಣನೂ ಬಾಯಿ ಬಿಡುವ ಈ ಸಂದರ್ಭದಲ್ಲಿ ಸಮಾಜದ ಹಣವನ್ನು ಹೆತ್ತವರು ನುಂಗಿ ಹಾಕಿದರು ಎಂಬ ಕಟು ಟೀಕೆಗಳೂ ವ್ಯಕ್ತವಾದವು. ಆದರೆ ಈ ಎಲ್ಲಾ ಚುಚ್ಚು ಮಾತುಗಳು ಬಂದರೂ ಮೃತ ಮಗು ತಂದೆ ಸಂದೀಪ್ ದೇವಾಡಿಗ ಮಾತ್ರ ಮಾದರಿ ಕಾರ್ಯ ಮಾಡಿದರು. ಒಟ್ಟು ಸಂಗ್ರಹವಾದ 48 ಲಕ್ಷ ರೂಪಾಯಿಯನ್ನೂ ಪುನಃ ಸಮಾಜಕ್ಕೆ ನೀಡಿದ್ದಾರೆ.

ಚಿಕಿತ್ಸೆಗೆ ಒಟ್ಟಾದ ಹಣದಲ್ಲಿ ಸತ್ಯದ ತುಳುವೆರ್ ಎಂಬ ಸಂಸ್ಥೆಯ ಸಹಯೋಗದಲ್ಲಿ ಮಲ್ಪೆಯ ಜೀವ ರಕ್ಷಕರೊಬ್ಬರಿಗೆ ಅಗತ್ಯವಿದ್ದ ಆ್ಯಂಬುಲೆನ್ಸ್‌ನ್ನು ನೀಡಿದ್ದಾರೆ. ಅಲ್ಲದೇ ಹಣವಿಲ್ಲದೇ ಚಿಕಿತ್ಸೆಗೆ ಪರದಾಡುತ್ತಿದ್ದ 18 ಬಡ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ಸ್ವಲ್ಪ ಹಣವನ್ನು ಉಚಿತ ಆ್ಯಂಬುಲೆನ್ಸ್ಗಾಗಿ ನೀಡಲಾಗಿದೆ. ಇನ್ನೂ ಅನೇಕ ಜನರಿಗೆ ಸಹಾಯ ಮಾಡುವ ಉದ್ದೇಶ‌ ಹೊಂದಿದ್ದಾರೆ.

ಸಂಗ್ರಹವಾದ 48 ಲಕ್ಷ ರೂಪಾಯಿಯನ್ನೂ ಮರಳಿ ಸಮಾಜಕ್ಕೆ ನೀಡುವ ನಿರ್ಧಾರವನ್ನು ಸಂದೀಪ್ ದೇವಾಡಿಗ ಕೈಗೊಂಡಿದ್ದಾರೆ. ಈ ಮೂಲಕ ತನ್ನ ಮಗು ಉಸಿರು ನಿಲ್ಲಿಸಿದರೂ ಮಗುವಿನ ಹೆಸರು ಉಳಿಸಲು ಔದಾರ್ಯ ಮೆರೆದಿದ್ದಾರೆ. ಸಂಗ್ರಹವಾದ ಎಲ್ಲಾ ಹಣವನ್ನು ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸಿದ್ದಾರೆ. ಒಟ್ಟಿನಲ್ಲಿ ತಮ್ಮ ಕರುಳ ಬಳ್ಳಿ ಉಳಿಯದಿದ್ದರೂ, ಸಮಾಜ ನೀಡಿದ ಸಹಾಯವನ್ನು ನೆನಪಿನಲ್ಲಿರಿಸಿ ಮತ್ತೆ ಸಮಾಜಕ್ಕೆ ನೆರವು ನೀಡುವ ಮೂಲಕ ಸಂದೀಪ್ ದೇವಾಡಿಗ ಮಾದರಿಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...