ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು. ಪ್ರಜಾಪ್ರಭುತ್ವದಲ್ಲಿ ಸೌಂದರ್ಯ ಅಡಗಿರುವುದು ಇದೇ ಮತದಾನದಲ್ಲಿ. ಆದರೆ ಮತದಾನದ ಬಗ್ಗೆ ಅರಿವಿದ್ದರೂ ಎಷ್ಟೋ ಜನ ‘ ಅಷ್ಟೊಂದು ದೂರ ಯಾರ್ ಹೋಗ್ತಾರೆ’ ಎಂದು ಹಕ್ಕು ಚಲಾಯಿಸಲು ಹೋಗದೆ ಉದಾಸೀನ ಮಾಡುತ್ತಾರೆ.
ಕೆಲಸಕ್ಕಾಗಿ ಊರಿಂದ ದೂರ ದೂರದ ಊರುಗಳಿಗೆ ಹೋಗಿ ಬದುಕುಕಟ್ಟಿಕೊಂಡಿರುವವರು ತಾವಿರುವ ಸ್ಥಳದಿಂದಲೇ ವೋಟಿಂಗ್ ಮಾಡುವ ಹೊಸ ತಂತ್ರಜ್ಞಾನ ಬರುತ್ತಿದೆ.
ಹೀಗೆ ಕುಳಿತಲ್ಲಿಂದಲೇ ಮತ ಚಲಾಯಿಸುವ ಹೊಸ ತಂತ್ರಜ್ಞಾನದ ಆನ್ವೇಷಣೆಗೆ ಚುನಾವಣಾ ಆಯೋಗ ಮುಂದಾಗಿದೆ. ಈ ಹೊಸ ಆವಿಷ್ಕಾರಕ್ಕೆ ಐಐಟಿ ಮದ್ರಾಸ್ ಸಾಥ್ ನೀಡಿದೆ. ಈಗಾಗಲೇ ಹೊಸ ವೋಟಿಂಗ್ ತಂತ್ರಜ್ಞಾನದ ಬಗ್ಗೆ ಐಐಟಿ ಮದ್ರಾಸ್‌ನಲ್ಲಿ ಸಂಶೋಧನೆ ಸಹ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ಬ್ಲಾಕ್ ಚೈನ್ ಸಹ ಈ ಹೊಸ ತಂತ್ರಜ್ಞಾನದಲ್ಲಿ ಇರಲಿದೆ ಎಂದು ಸೀನಿಯರ್ ಡೆಪ್ಯುಟಿ ಎಲೆಕ್ಷನ್ ಕಮಿಷನರ್ ಸಂದೀಪ್ ಸಕ್ಸೆನಾ ತಿಳಿಸಿದ್ದಾರೆ.
ಬರಲಿರುವ ಹೊಸ ತಂತ್ರಜ್ಞಾನದಲ್ಲಿ ಎರಡು ಮಾದರಿಯ ವೋಟಿಂಗ್ ವ್ಯವಸ್ಥೆ ಇರಲಿದೆಯಂತೆ. ನಿಯಂತ್ರಿಸಲು ಸಾಧ್ಯವಾಗುವಂತಹ ಇಂಟರ್ನೆಟ್ ಲೈನ್ಸ್ ಹಾಗೂ ವೈಟ್-ಲಿಸ್ಟ್ ಮಾಡಲಾದ ಐಪಿ ಸಾಧನಗಳ ಮೂಲಕ ಇದು ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಬಯೋಮೆಟ್ರಿಕ್ ಮತ್ತು ವೆಬ್ ಕ್ಯಾಮೆರಾಗಳು ಇರಲಿವೆ ಎಂದು ಹೇಳಲಾಗಿದೆ.
ಮೊದಲು ವ್ಯಕ್ತಿಯ ಗುರುತನ್ನು ತಂತ್ರಜ್ಞಾನ ದಾಖಲಿಸಲಿದೆ. ಹೀಗೆ ಗುರುತಿನ ಪರೀಕ್ಷೆಯಲ್ಲಿ ಓಕೆ ಆದ ಬಳಿಕ ಬ್ಲಾಕ್‌ಚೈನ್‌ನಿಂದ ವ್ಯವಸ್ಥೆಗೊಳಿಸಿದ ಇ-ಬ್ಯಾಲೆಟ್ ಪೇಪರ್ ರಚನೆಯಾಗುತ್ತದೆ. ಇಲ್ಲಿ ಮತ ಚಲಾಯಿಸಿದಾಗ, ಯಾವ ಅಭ್ಯರ್ಥಿಗೆ ವೋಟ್ ಮಾಡುತ್ತಾರೋ ಆಯಾ ಅಭ್ಯರ್ಥಿಗೆ ಮತ ಬೀಳುತ್ತದೆ ಎಂಬ ಮಾಹಿತಿ ಸಿಕ್ಕಿದೆ.ಶೀಘ್ರದಲ್ಲೇ ಇದು ಪರಿಚಯವಾಗುವ ನಿರೀಕ್ಷೆ ಇದೆ.