ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿರುವ ಮಧ್ಯೆ ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕೆಂದು ಪಟ್ಟು ಹಿಡಿದು ಅದನ್ನು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತದಾನಕ್ಕೂ ಮುನ್ನವೇ ಜೆಡಿಎಸ್ ನಾಯಕರು ದೊಡ್ಡ ಶಾಕ್ ನೀಡಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಅವರಿಗೆ ಬೆಂಬಲ ನೀಡುವ ಕುರಿತಂತೆ ಮೈಸೂರು ಹೊರ ವಲಯದಲ್ಲಿ ಇಂದು ನಡೆದ ಸಭೆ ಮಧ್ಯದಲ್ಲಿ ಹೊರ ಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಜಿ.ಟಿ. ದೇವೇಗೌಡ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಂಡರೆ ಅದಕ್ಕೆ ತಾವಾಗಲಿ ಅಥವಾ ಸಾ.ರಾ. ಮಹೇಶ್ ಅವರಾಗಲಿ ಹೊಣೆಯಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ಹೆಚ್. ವಿಶ್ವನಾಥ್ ಚುನಾವಣೆಯಲ್ಲಿ ಸೋತ ವೇಳೆ ಅದರ ಹೊಣೆಯನ್ನು ಸಿದ್ದರಾಮಯ್ಯನವರು ಹೊತ್ತುಕೊಂಡಿದ್ದರೇ ಎಂದು ಜಿ.ಟಿ. ದೇವೇಗೌಡರು ಪ್ರಶ್ನಿಸಿದ್ದು, ಈ ಮೂಲಕ ಮತದಾನಕ್ಕೂ ಮುನ್ನವೇ ಜೆಡಿಎಸ್ ನಾಯಕರು ಸೋಲಿನ ಮಾತನಾಡಿರುವುದು ಯಾಕೆ ಎಂಬ ಪ್ರಶ್ನೆ ಈಗ ಮೂಡಿದೆ. ಈ ಮಧ್ಯೆ ಇಂದಿನ ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು, ತಾವು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದಿಲ್ಲವೆಂದು ತಿಳಿಸಿದ್ದಾರೆನ್ನಲಾಗಿದೆ.