ಇಂದು ದರ್ಶನ್ ಅವರ ಕಸ್ಟಡಿ ಅವಧಿ ಅಂತ್ಯವಾಗಿದ್ದು ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ದರ್ಶನ್ ಸೇರಿದಂತೆ ಇತರ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೀಗಾಗಿ ಇಂದಿನಿಂದ ಜೈಲಿನಲ್ಲಿ ದರ್ಶನ್ ಮುದ್ದೆ ಮುರಿಯುವುದು ಪಕ್ಕಾ ಆಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿಚಾರಣೆ ಬಹುತೇಕ ಮುಗಿದಿದೆ. ಹೀಗಾಗಿ ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಿಲ್ಲ. ಇದರಿಂದ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರಕ್ಕೆ ರವಾನಿಸಲು ಕೋರ್ಟ್ ಆದೇಶ ನೀಡಿದೆ. ದರ್ಶನ್ ಜೊತೆಗೆ ವಿನಯ್, ಪ್ರದೋಶ್ ಮತ್ತು ಧನರಾಜು ಕಸ್ಟಡಿ ಅಂತ್ಯವಾಗಿದ್ದು, ಪೊಲೀಸರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಅವರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಸದ್ಯ ಪರಪ್ಪನ ಅಗ್ರಹಾರವನ್ನು ಡಿ ಗ್ಯಾಂಗ್ ಸೇರಿದೆ. ಈ ಮೂಲಕ ಜುಲೈ 4 ರವರೆಗೆ ದರ್ಶನ್ ಜೈಲುಪಾಲಾಗಿದ್ದಾರೆ. ಈ ಹಿಂದೆ ಹೆಂಡತಿ ವಿಜಯಲಕ್ಷ್ಮಿ ಮೇಲೆ ಕೈ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಆಗಲೂ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಇದು ಎರಡನೇ ಬಾರಿಗೆ ದರ್ಶನ್ ಜೈಲು ವಾಸ ಅನುಭವಿಸಲಿದ್ದಾರೆ.