: ಭಾರತ ತಂಡ ಮಾಜಿ ಸ್ಪಿನ್ನರ್ ರಮೇಶ್ ಪವಾರ್ ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮರಳಿ ನೇಮಕಗೊಂಡಿದ್ದಾರೆ. ಡಬ್ಲ್ಯು.ವಿ ರಾಮನ್ ಕೋಚ್ ಸ್ಥಾನದಿಂದ ಕೆಳಗಿಳಿದ ಬಳಿಕ ರಮೇಶ್ ಪೊವಾರ್ ಈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಅಂದಹಾಗೆ ಎರಡು ವರ್ಷಗಳ ಹಿಂದೆ ಭಾರತ ಏಕದಿನ ಕ್ರಿಕೆಟ್ ಮಹಿಳಾ ತಂಡದ ನಾಯಕ ಮಿಥಾಲಿ ರಾಜ್ ಜೊತೆಗಿನ ಇರುಸು ಮುರುಸಿನ ಕಾರಣ ರಮೇಶ್ ಪವಾರ್ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ಮದನ್ ಲಾಲ್ ಸಾರಥ್ಯದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸಲಹೆ ಮೇರೆಗೆ 42 ವರ್ಷದ ಮಾಜಿ ಕ್ರಿಕೆಟಿಗ ಪವಾರ್ ಅವರನ್ನು ಮುಖ್ಯ ಕೋಚ್ ಆಗಿ ಪುನಃ ನೇಮಕ ಮಾಡಲಾಗಿದೆ.
“ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ರಮೇಶ್ ಪವಾರ್ ಅವರನ್ನು ಮುಖ್ಯ ಕೋಚ್ ಆಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೇಮಕ ಮಾಡಿದೆ. ಕೋಚ್ ಹುದ್ದೆ ಸಲುವಾಗಿ ಬಂದಿದ್ದ 35 ಅರ್ಜಿಗಳು ಬಂದಿದ್ದು, ಅಂತಿಮವಾಗಿ ರಮೇಶ್ ಪವಾರ್ ಆಯ್ಕೆ ಮಾಡಲಾಗಿದೆ,” ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮುಖ್ಯ ಕೋಚ್ ಸ್ಥಾನ ಸಲುವಾಗಿ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಅಜಯ್ ರಾತ್ರ ಮತ್ತು ಮಾಜಿ ಮಹಿಳಾ ಕ್ರಿಕೆಟರ್ ಹೇಮಲತಾ ಕಲಾ ಅವರಿಂದ ಭಾರಿ ಪೈಪೋಟಿ ಮೂಡಿಬಂದಿತ್ತು. ಇದೀಗ ರಮೇಶ್ ಮರಳಿ ಆಯ್ಕೆಯಾಗಿದ್ದು, ಓಡಿಐ ತಂಡದ ನಾಯಕಿ ಮಿಥಾಲಿ ರಾಜ್ ಜೊತೆಗೆ ಹೇಗೆ ಕೆಲಸ ಮಾಡಲಿದ್ದಾರೆ ಎಂಬುದು ಬಹಳಾ ಕುತೂಹಲ ಕೆರಳಿಸಿದೆ.