ಶಾಸಕರ ರಾಜೀನಾಮೆಯಿಂದ 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ 17 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ಕೇವಲ 3 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಹೀಗಾಗಿ ದೋಸ್ತಿ ಯನ್ನು ಮುಂದುವರಿಸುವ ಸಲುವಾಗಿ ಮಾತನಾಡಲು ಕಾಂಗ್ರೆಸ್ ನಾಯಕರು ಇಂದು ನಮ್ಮನ್ನು ಭೇಟಿಯಾಗಿದ್ದು ಒಟ್ಟಾಗಿ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಜೆಡಿಎಸ್ ಪಕ್ಷದಿಂದ ಬಂಡಾಯವೆದ್ದು ಈಗಾಗಲೇ ಪಕ್ಷದಿಂದ ಹೊರನಡೆದಿರುವ ಪಕ್ಷದ ಮೂವರು ಶಾಸಕರ ಅನರ್ಹತೆ ವಿಚಾರ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿದೆ ಹೀಗಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಮೂರು ಕ್ಷೇತ್ರದ ಅಭ್ಯರ್ಥಿಗಳನ್ನು ನೀವೇ ನಿರ್ಧಾರ ಮಾಡಿ ಎಂದು ಕಾರ್ಯಕರ್ತರು ಮನವಿಯನ್ನು ಮಾಡಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ.
ಎಲ್ಲಾ 17 ಕ್ಷೇತ್ರಗಳಿಗೂ ಆರು ತಿಂಗಳ ಒಳಗಾಗಿ ಚುನಾವಣೆ ನಡೆಯಲಿದ್ದು ಎಲ್ಲದ್ದಕ್ಕೂ ಸಿದ್ಧರಾಗಿ ಅಂತ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಿರಿಯ ನಾಯಕರು ನಾಳೆ ಸಭೆ ಸೇರುತ್ತಿದ್ದು ಕೋರ್ ಕಮಿಟಿ, ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರ ನೇಮಕಾತಿಯನ್ನು ಆಗಸ್ಟ್ 6, 7ರಂದು ಮಾಡುತ್ತೇವೆ, ಆಗಸ್ಟ್ 7ರಿಂದ 10ರೊಳಗೆ ಜಿಲ್ಲಾ ಸಮಿತಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಹಾಗೂ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹುಣಸೂರು ಕ್ಷೇತ್ರದ ವಿಶ್ವನಾಥ್, ಕೆಆರ್ ಪೇಟೆ ಕ್ಷೇತ್ರದ ನಾರಾಯಣ ಗೌಡ, ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ಗೋಪಾಲಯ್ಯ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದೇವೆ ಎಂದು ಹೇಳಿದರು.