ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. 89 ವರ್ಷದ ಮನಮೋಹನ್ ಸಿಂಗ್‌ರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬುಧವಾರ ಸಂಜೆ ಡಾ. ಮನಮೋಹನ್ ಸಿಂಗ್‌ರನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ್ವರ ಮತ್ತು ನಿಶಕ್ತಿಯಿಂದ ಅವರು ಬಳಲುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸೋಮವಾರವೂ ಅವರಿಗೆ ಜ್ವರ ಕಾಣಿಸಿಕೊಂಡಿತ್ತು, ಬಳಿಕ ಚೇತರಿಸಿಕೊಂಡರು ಸುಸ್ತು ಕಾಣಿಸಿಕೊಂಡಿದೆ.
ಜ್ವರ ಕಾಣಿಸಿಕೊಂಡ ಬಳಿಕ ಮನಮೋಹನ್ ಸಿಂಗ್ ಅತಿಯಾಗಿ ಆಯಾಸಗೊಂಡಿದ್ದರು. ದ್ರವ ರೂಪದ ಆಹಾರವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ಇದೆ. ಈ ವರ್ಷದ ಏಪ್ರಿಲ್‌ನಲ್ಲಿ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಎಐಸಿಸಿ ಕಾರ್ಯದರ್ಶಿ ಪ್ರಣವ್ ಝಾ ಈ ಕುರಿತು ಮಾತನಾಡಿದ್ದಾರೆ, “ಅವರ ಆರೋಗ್ಯ ಸ್ಥಿರವಾಗಿದೆ. ಸಾಮಾನ್ಯ ಚಿಕಿತ್ಸೆಗಾಗಿ ಅವರು ದಾಖಲಾಗಿದ್ದಾರೆ. ಹೆಚ್ಚಿನ ಮಾಹಿತಿ ಇದ್ದರೆ ಹಂಚಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
“ಮನಮೋಹನ್ ಸಿಂಗ್ ಅವರ ಆರೋಗ್ಯದ ಬಗ್ಗೆ ಕೆಲವು ವದಂತಿಗಳು ಕೇಳಿ ಬರುತ್ತಿವೆ. ಅವರ ಆರೋಗ್ಯ ಸ್ಥಿರವಾಗಿವೆ. ಯಾವುದಾದರೂ ಮಾಹಿತಿ ಇದ್ದರೆ ನಾವು ಹಂಚಿಕೊಳ್ಳುತ್ತೇವೆ. ಮಾಧ್ಯಮದ ಸ್ನೇಹಿತರ ಕಾಳಜಿಗೆ ಧನ್ಯವಾದಗಳು” ಎಂದು ಪ್ರಕಟಣೆಯಲ್ಲಿ ಪ್ರಣವ್ ಝಾ ತಿಳಿಸಿದ್ದಾರೆ.