ಚಿತ್ರದುರ್ಗ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಸುರಿದ ಮಳೆಗೆ ಜನರು ತತ್ತರಿಸಿದ್ದಾರೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.
ಚಳ್ಳಕೆರೆಯ ಅಂಬೇಡ್ಕರ್ ನಗರದಲ್ಲಿ ಮನೆ ಗೊಡೆ ಕುಸಿದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಮನೆಯಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮನೆಯಲ್ಲಿದ್ದ ಪಾತ್ರೆ, ಪೀಠೋಪಕರಣಗಳು ಜಖಂಗೊಂಡಿವೆ. ಚಳ್ಳಕೆರೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳು ಜಲಾವೃತವಾಗೊಂಡಿವೆ.
ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಭಾರೀ ಮಳೆಯಾಗಿದ್ದು ನಗರದ ರಸ್ತೆಗಳು ನದಿಯಂತೆ ಉಕ್ಕಿ ಹರಿದಿವೆ. ಮಳೆ ನೀರು ಮನೆಗೆ ನುಗ್ಗಿದ್ದರಿಂದ ಜನರು ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ 34 ಮಿ. ಮೀ., ದೇವರ ಮರಿಕುಂಟೆ 7.3, ಮಿ. ಮೀ. ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ರಾತ್ರಿ ಸುರಿದ ಮಳೆಗೆ ಹಳ್ಳ-ಕೊಳ್ಳಗಳು, ಚೆಕ್ ಡ್ಯಾಂ ಭರ್ತಿಯಾಗಿವೆ. ಇನ್ನೂ ತಾಲ್ಲೂಕಿನ ಕಾತ್ರಿಕೇನಹಳ್ಳಿ ಅಣೆಕಟ್ಟು ಮೈದುಂಬಿ ಹರಿಯುತ್ತಿದೆ. ಇತ್ತ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಭಾಗದಲ್ಲಿ ಭಾರೀ ಮಳೆಯಾಗಿದ್ದು ತಾಲೂಕಿನ ವೇದಾವತಿ ನದಿ ಅರ್ಧದಷ್ಟು ತುಂಬಿ ಹರಿಯುತ್ತಿವೆ. ಹಿರಿಯೂರು ನಗರದ ವೇದಾವತಿ ನದಿಯ ದಡದಲ್ಲಿರುವ ಶಿವನ ದೇವಾಲಯ ಅರ್ಧಕ್ಕೆ ಮುಳುಗಡೆಯಾಗಿದೆ.
ತಾಲ್ಲೂಕಿನ ವಿವಿ ಪುರ ಗ್ರಾಮದಲ್ಲಿ 5 ಮನೆಗಳು, ಕೂಡ್ಲಹಳ್ಳಿ, ಯರಬಳ್ಳಿ, ಖಂಡೇನಹಳ್ಳಿ , ಗೊಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಟ್ಟು 21 ಮನೆಗಳು ಬಿದ್ದಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಾನಿಯಾಗಿರುವ ವರದಿಯಾಗಿದೆ. ಹಿರಿಯೂರು ಕಸಬಾ ಹೋಬಳಿಯಲ್ಲಿ 46.2. ಮಿ. ಮೀ., ಬಬ್ಬೂರು 30.6 ಮಿ. ಮೀ., ಇಕ್ಕನೂರು 19.4 ಮಿ. ಮೀ., ಜವನಗೊಂಡನಹಳ್ಳಿ 27.0 ಮಿ. ಮೀ, ಸೂಗೂರು 13.2 ಮಿ. ಮೀ. ಮಳೆ ವರದಿಯಾಗಿದೆ.