ಮಹಿಳೆಯರಿಗೆ ಗುಡ್ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ
ಬೆಂಗಳೂರು: ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರ ಮನಗೆದ್ದಿದ್ದ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಮಹತ್ವದ ಉಡುಗೊರೆಯನ್ನು ನೀಡಿದೆ. ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಒಂದು ದಿನ ಸಂಬಳ ಸಹಿತ ರಜೆ ನೀಡುವ ನಿರ್ಧಾರಕ್ಕೆ ಇಂದು ನಡೆದ ಕ್ಯಾಬಿನೆಟ್ ಸಭೆ ಒಪ್ಪಿಗೆ ನೀಡಿದೆ.
ಕಾರ್ಮಿಕ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಈ ಹೊಸ ನೀತಿಯನ್ನು “ಋತು ಚಕ್ರ ರಜೆ ನೀತಿ 2025” ಎಂದು ಹೆಸರಿಸಲಾಗಿದೆ. ರಾಜ್ಯ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, MNC, ಐಟಿ ಹಾಗೂ ಇತರೆ ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಇದರ ಪ್ರಯೋಜನ ಪಡೆಯಲಿದ್ದಾರೆ.
ಈ ನೀತಿಯಡಿ ಮಹಿಳೆಯರಿಗೆ ವರ್ಷಕ್ಕೆ 12 ದಿನ ಸಂಬಳ ಸಹಿತ ರಜೆ ದೊರೆಯಲಿದೆ. ಯಾವ ದಿನ ರಜೆ ಪಡೆಯಬೇಕು ಎಂಬುದನ್ನು ಮಹಿಳೆಯರು ಸ್ವತಃ ನಿರ್ಧರಿಸಬಹುದು. ಣ್ಣುಮಕ್ಕಳ ಪರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ತಿಂಗಳಲ್ಲಿ ಋತುಚಕ್ರವಾದಾಗ ಯಾವ ದಿನ ಬೇಕಾದರೂ ಒಂದು ದಿನ ರಜೆ ಪಡೆಯಬಹುದು. ಕಾನೂನು ಇಲಾಖೆಯ ಸಲಹೆ ಪಡೆದು ಎಲ್ಲ ಚರ್ಚೆಗಳು ಪೂರ್ಣಗೊಂಡಿವೆ. ಶೀಘ್ರದಲ್ಲೇ ಬಿಲ್ ತರಲಾಗುತ್ತದೆ ಹಾಗೂ ದೊಡ್ಡ ಮಟ್ಟದ ಕಾರ್ಯಕ್ರಮದ ಮೂಲಕ ಈ ಯೋಜನೆ ಜಾರಿಗೆ ಬರಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.