ಟೀಮ್ ಇಂಡಿಯಾದ ಮಾಜಿ ನಾಯಕ. ಕೂಲ್ ಕ್ಯಾಪ್ಟನ್ ಎಂದೇ ಜನಮನದಲ್ಲಿ ನೆಲೆಸಿರುವ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ. ಭಾರತಕ್ಕೆ 2007ರ ಟಿ20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ತಂದು ಕೊಟ್ಟ ಹೆಮ್ಮೆಯ ನಾಯಕ ಈ ಮಾಹಿ..! ಇಡೀ ವಿಶ್ವ ಕ್ರಿಕೆಟೇ ಧೋನಿಯ ಆಟವನ್ನು ಮೆಚ್ಚಿದೆ. ಧೋನಿ ವಿಶ್ವ ಕ್ರಿಕೆಟ್ನ ಅದ್ಭುತ ಫಿನಿಶರ್.
ಆದರೆ ಪ್ರಸಕ್ತ ವಿಶ್ವಕಪ್ನಲ್ಲಿ ಧೋನಿ ಬ್ಯಾಟ್ ಸದ್ದು ಮಾಡ್ತಿಲ್ಲ..! ಟೀಮ್ ಇಂಡಿಯಾ ಏನೋ ಉತ್ತಮ ಪ್ರದರ್ಶನ ತೋರುತ್ತಿದ್ದು, ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. 3ನೇ ಐಸಿಸಿ ವಿಶ್ವಕಪ್ ಅನ್ನು ಹೊತ್ತು ತರಲು ರೆಡಿಯಾಗಿದೆ ವಿರಾಟ್ ಪಡೆ…! ಆದರೆ, ಧೋನಿ ಮಾತ್ರ ಫಾರ್ಮ್ ಕಳೆದುಕೊಂಡು ಬಿಟ್ಟಿದ್ದಾರೆ.
ಧೋನಿ ತಮ್ಮ ಸಾಮರ್ಥ್ಯ, ತಾಕತ್ತಿಗೆ ತಕ್ಕಂತೆ ಆಡುತ್ತಿಲ್ಲ.. ಧೋನಿ ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ.. ಧೋನಿ ವಿಶ್ವಕಪ್ ನಂತರ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಮಾತುಗಳು, ಟೀಕೆಗಳು ಬರುತ್ತಿವೆ..! ಈ ನಡುವೆ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಹೌದು, ಲಸಿತ್ ‘ನನ್ನ ಪ್ರಕಾರ ಎಂಎಸ್ (ಧೋನಿ) ಇನ್ನೂ ಒಂದು ಅಥವಾ ಎರಡು ವರ್ಷ ಆಡಬೇಕು. ಅವರು ಕಳೆದ 10 ವರ್ಷಗಳಿಂದಲೂ ಬೆಸ್ಟ್ ಫಿನಿಷರ್ ಎಂದು ಹೆಸರುವಾಸಿಯಾದವರು. ಮುಂದೆಯೂ ಈ ವಿಚಾರದಲ್ಲಿ ಅವರನ್ನು ಯಾರೂ ಹಿಂದಿಕ್ಕಲಾರರು ಎಂದು ನನಗನ್ನಿಸುತ್ತಿದೆ. ಪಂದ್ಯದ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ಮುಂಬರುವ ಯುವಕರಿಗೆ ಮಾಹಿ ಮಾರ್ಗದರ್ಶನ ನೀಡಬೇಕು’ ಎಂದಿದ್ದಾರೆ.