ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದ ಈರುಳ್ಳಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಗೆ ಗುರಿಯಾಗಿದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರೀ ಮಳೆಗೆ ಕಟಾವಿಗೆ ಬಂದಿರುವ ಈರುಳ್ಳಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಳೆದ ಸಾಲಿನ ಸರಾಸರಿ ಈರುಳ್ಳಿ ಮಾರುಕಟ್ಟೆ ಬೆಲೆಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ಮಾರಾಟ ದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ
ಒಟ್ಟು 2.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ವಾರ್ಷಿಕ ಉತ್ಪಾದನೆ 27 ಲಕ್ಷ ಮೆಟ್ರಿಕ್ ಟನ್‌ಗಳಷ್ಟಾಗಿದೆ. ವಿಶೇಷವಾಗಿ ವಿಜಯಪುರ, ಚಿತ್ರದುರ್ಗ, ಬಾಗಲಕೋಟೆ, ವಿಜಯನಗರ, ಬೆಳಗಾವಿ, ಧಾರವಾಡ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಹಾನಿ ಹೆಚ್ಚಾಗಿದೆ. ಹಾಲಿ ಸಾಲಿನ ಮಾರುಕಟ್ಟೆ ಬೆಲೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿದ್ದು, ರೈತರಿಗೆ ಆರ್ಥಿಕ ನಷ್ಟದ ಭೀತಿ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಪಿಡಿಪಿಎಸ್ ಅಡಿಯಲ್ಲಿ ಈರುಳ್ಳಿ ಖರೀದಿ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಹಾನಿಗೀಡಾದ ಬೆಳೆ ಮರುಪಡೆಯಲು ಮತ್ತು ರೈತರಿಗೆ ಪರಿಹಾರ ನೀಡಲು ಕ್ರಮಗಳನ್ನು ಪರಿಶೀಲಿಸುತ್ತಿವೆ.






