ಮುಂದಿನ ವರ್ಷದ ಹೊತ್ತಿಗೆ ನಮ್ಮ ದೇಶ 356 ಲಕ್ಷ ಕೋಟಿ ಆರ್ಥಿಕತೆ ಹೊಂದಲಿದೆ: ಸಚಿವ ಅಶ್ವಿನಿ ವೈಷ್ಣವ್
ಬೆಂಗಳೂರು: ಮುಂದಿನ ವರ್ಷದ ಹೊತ್ತಿಗೆ ನಮ್ಮ ದೇಶ 356 ಲಕ್ಷ ಕೋಟಿ ಆರ್ಥಿಕತೆ ಹೊಂದಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದ ಹೊತ್ತಿಗೆ ನಮ್ಮ ದೇಶ 356 ಲಕ್ಷ ಕೋಟಿ ಆರ್ಥಿಕತೆ ಹೊಂದಲಿದೆ. ಜಗತ್ತಿನ ಐದನೇ ದೊಡ್ಡ ಆರ್ಥಿಕತೆಯ ದೇಶ ಭಾರತ. ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ಗಳಿಗೆ ಹೋಲಿಸಿದರೆ ನಮ್ಮ ಆರ್ಥಿಕತೆಯ ಆರೋಗ್ಯ ಚೆನ್ನಾಗಿದೆ. ಉತ್ಪಾದನಾ ವಲಯಕ್ಕೂ ಬಜೆಟ್ ಹೆಚ್ಚಿನ ಆದ್ಯತೆ ನೀಡಿದೆ ಎಂದಿದ್ದಾರೆ.
ಈ ಬಾರಿಯ ಬಜೆಟ್ನ ಬಹು ಮುಖ್ಯ ಅಂಶ ತೆರಿಗೆ ಸುಧಾರಣೆ. ಪ್ರಧಾನಿ ಮೋದಿ ಆರ್ಥಿಕ ಚಿಂತನೆಗಳು ಸಾಕಷ್ಟು ಬದಲಾವಣೆ ತಂದಿದೆ. ಹತ್ತು ವರ್ಷಗಳ ಹಿಂದೆ ಕಾಲ್ ಡ್ರಾಪ್ ಆಗುವುದು ದೊಡ್ಡ ಚರ್ಚೆ ಆಗುತ್ತಿತ್ತು. ಈಗ ನಮಗೆ ಉತ್ತಮ 5ಜಿ ನೆಟ್ ವರ್ಕ್ ಇದೆ. ಕಳೆದ ಹತ್ತು ವರ್ಷದಿಂದ ವಿವಿಗಳು, ಐಐಎಂ, ಐಐಟಿ, ಮೆಡಿಕಲ್ ಕಾಲೇಜುಗಳ ಸಂಖ್ಯೆ ದುಪ್ಪಟ್ಟಾಗಿವೆ.
ಬಡ-ಮಧ್ಯಮ ವರ್ಗದ ಮೇಲೆ ಈ ಬಾರಿ ಬಜೆಟ್ ಫೋಕಸ್ ಮಾಡಿದೆ. ಕಿಸಾನ್ ಸಮ್ಮಾನ್ ನಿಧಿಯಂತಹ ರೈತ ಕಲ್ಯಾಣ ಯೋಜನೆಗಳು ಬದಲಾವಣೆಗೆ ಸಾಕ್ಷಿ ಆಗಿವೆ. ಸಣ್ಣ, ಅತಿ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ನಿರೀಕ್ಷೆ, ಭರವಸೆ ನಮ್ಮ ಸರ್ಕಾರದಿಂದ ಸಿಕ್ಕಿದೆ. ಈಗ ದೇಶ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸಿದೆ. ಹಣದುಬ್ಬರಕ್ಕೆ ಕಡಿವಾಣ ಬಿದ್ದಿದೆ ಎಂದು ಹೇಳಿದ್ದಾರೆ.