ಮುಂದಿನ 3 ದಿನಗಳ ಕಾಲ ಈ ರಾಜ್ಯಗಳಲ್ಲಿ ಭಾರೀ ಮಳೆ

0
29

ಮುಂಗಾರು ಪ್ರಭಾವ ಸೆಪ್ಟೆಂಬರ್ ಅಂತ್ಯದವರೆಗೂ ಮುಂದುವರೆಯಲಿದ್ದು ಈ ತಿಂಗಳು ಅತಿ ಹೆಚ್ಚು ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವು ರಾಜ್ಯಗಳಲ್ಲಿ ಮುಂದಿನ ಮೂರು ದಿನಗಳ ಅವಧಿ ಭಾರೀ ಮಳೆಯಾಗುವ ಸಾಧ್ಯತೆಯನ್ನು ವಿವರಿಸಿದೆ.

ಶುಕ್ರವಾರ ಗುಜರಾತ್‌ನಲ್ಲಿ ಅಧಿಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಸೆಪ್ಟೆಂಬರ್ 6ರವರೆಗೂ ದೇಶದ ಮಧ್ಯ ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ತಿಳಿಸಿದೆ. ಶುಕ್ರವಾರ ಹಾಗೂ ಶನಿವಾರ ಸೌರಾಷ್ಟ್ರ ಹಾಗೂ ಕಚ್‌ನಲ್ಲಿ ಭಾರೀ ಪ್ರಮಾಣದ ಮಳೆ ದಾಖಲಾಗುವುದಾಗಿ ಹೇಳಿದೆ.

 

ಬುಧವಾರ ಅತ್ಯಧಿಕ ಪ್ರಮಾಣದ ದಾಖಲೆ ಮಳೆ ಪಡೆದ ನಂತರ ದೆಹಲಿಯಲ್ಲಿ ಗುರುವಾರ ಕೂಡ ಮಳೆ ಮುಂದುವರೆದಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ಎರಡು ದಿನಗಳ ಕಾಲ ದೆಹಲಿಯಲ್ಲಿ ಮಳೆ ಮುಂದುವರೆಯುವುದಾಗಿ ತಿಳಿಸಿದೆ. ಮುಂದೆ ಓದಿ..

 

ಮಂಗಳವಾರದಿಂದ ಗುರುವಾರದವರೆಗೆ ದೆಹಲಿಯಲ್ಲಿ 229.8 ಎಂಎಂ ಮಳೆಯಾಗಿದ್ದು, ಸೆಪ್ಟೆಂಬರ್ ತಿಂಗಳ ಮಳೆ ಅಂದಾಜನ್ನು ಮೀರಿಸಿದೆ. ಕಳೆದ 19 ವರ್ಷಗಳಲ್ಲೇ ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಗರಿಷ್ಠ ಪ್ರಮಾಣದ ಮಳೆ ದಾಖಲಾಗಿದೆ.
ಭಾರೀ ಮಳೆಯಿಂದಾಗಿ ದೆಹಲಿಯೆಲ್ಲೆಡೆ ರಸ್ತೆಗಳು ಜಲಾವೃತವಾಗಿವೆ. 2002ರಲ್ಲಿ ದೆಹಲಿಯಲ್ಲಿ ಸೆಪ್ಟೆಂಬರ್ 13 ರಂದು 126.8 ಎಂಎಂ ಮಳೆಯಾಗಿತ್ತು. 1963ರಲ್ಲಿ ಸೆಪ್ಟೆಂಬರ್ 16ರಂದು 172.6 ಎಂಎಂ ಮಳೆ ದಾಖಲಾಗಿತ್ತು.ಇದೀಗ ಅತಿ ಹೆಚ್ಚಿನ ಮಳೆ ದಾಖಲಾಗಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಸೆಪ್ಟೆಂಬರ್ 7ರ ನಂತರ ಮತ್ತೆ ಚುರುಕಾಗುವ ಸೂಚನೆ ನೀಡಲಾಗಿದೆ.

ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣದಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ 5ರ ನಂತರ ಮಧ್ಯ ಭಾರತದಲ್ಲಿ ಮಳೆ ಪ್ರಮಾಣ ಹೆಚ್ಚಲಿದೆ. ಛತ್ತೀಸ್‌ಗಡದಲ್ಲಿ ಸೆಪ್ಟೆಂಬರ್ 4-6ರವರೆಗೆ, ವಿದರ್ಭಾ, ಪೂರ್ವ ಮಧ್ಯಪ್ರದೇಶದಲ್ಲಿ ಸೆಪ್ಟೆಂಬರ್ 5-6 ಹಾಗೂ ಪಶ್ಚಿಮ ಮಧ್ಯಪ್ರದೇಶದಲ್ಲಿ ಸೆಪ್ಟೆಂಬರ್ 6ರಂದು ಭಾರೀ ಮಳೆಯಾಗುವುದಾಗಿ ತಿಳಿಸಿದೆ.
ಒಡಿಶಾದಲ್ಲಿ ಸೆಪ್ಟೆಂಬರ್ 3-6ರವರೆಗೆ ಅಸ್ಸಾಂ ಹಾಗೂ ಮೇಘಾಲಯದಲ್ಲಿ ಸೆಪ್ಟೆಂಬರ್ 3 ಹಾಗೂ 4, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ಬಿಹಾರದಲ್ಲಿ ಸೆಪ್ಟೆಂಬರ್ 3ರಂದು ಅಧಿಕ ಮಳೆಯಾಗುವುದಾಗಿ ತಿಳಿಸಿದೆ.

 

ಕೊಂಕಣ ಹಾಗೂ ಗೋವಾ ಆಂಧ್ರದ ಕರಾವಳಿ ಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಸೆಪ್ಟೆಂಬರ್ 4-6ರವರೆಗೆ ಹಾಗೂ ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ 5ರಿಂದ 6ರವರೆಗೂ ಹೆಚ್ಚಿನ ಮಳೆಯಾಗುವುದಾಗಿ ತಿಳಿಸಿದೆ. ಮಧ್ಯ ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ 6ರಂದು ಅಧಿಕ ಮಳೆಯಾಗುವುದಾಗಿ ಮಾಹಿತಿ ನೀಡಿದೆ.
ದೇಶದ ಪೂರ್ವ ಹಾಗೂ ಈಶಾನ್ಯ ಭಾಗಗಳಲ್ಲಿ ಮುಂದಿನ ನಾಲ್ಕೈದು ದಿನಗಳವರೆಗೂ ಮಳೆ ಮುಂದುವರೆಯಲಿದೆ. ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ, ಅಸ್ಸಾಂ, ಮೇಘಾಲಯದಲ್ಲಿ ಈ ಅವಧಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

 

ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ತೀರಗಳಿಗೆ ಅಲರ್ಟ್ ನೀಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ರಾಮನಗರ, ತುಮಕೂರು, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಣೆ ಮಾಡಿ ಸೆಪ್ಟೆಂಬರ್ 6ರವರೆಗೂ ಮಳೆಯಾಗುವ ಸೂಚನೆ ನೀಡಲಾಗಿದೆ.

 

 

LEAVE A REPLY

Please enter your comment!
Please enter your name here