ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮುಂಗಾರು ಪ್ರಭಾವ ಮುಂದುವರೆದಿದ್ದು, ಇನ್ನೂ ಮೂರ್ನಾಲ್ಕು ದಿನ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಅಧಿಕ ಮಳೆಯಾಗುವ ಸೂಚನೆ ನೀಡಲಾಗಿದೆ. ಶನಿವಾರ ಮೇಘಾಲಯದಲ್ಲಿ ಭಾರೀ ಪ್ರಮಾಣದ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ 15ರವರೆಗೂ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಹೆಚ್ಚಿನ ಮಳೆಯಾಗಲಿದೆ. ಆನಂತರ ಈ ಪ್ರದೇಶಗಳಲ್ಲಿ ಮಳೆ ತಗ್ಗಲಿದೆ ಎಂದು ತಿಳಿಸಿದೆ. ಹಿಮಾಲಯದ ಭಾಗಗಳಲ್ಲಿ ಹಾಗೂ ಉತ್ತರಾಖಂಡದಲ್ಲಿ ಆಗಸ್ಟ್ 15ರಂದು ಹೆಚ್ಚಿನ ಮಳೆಯಾಗುವುದಾಗಿ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಮಳೆ ತಗ್ಗಿದ್ದು, ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ.
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಪ್ರಭಾವದಿಂದಾಗಿ ಒಡಿಶಾ, ಆಂಧ್ರಪ್ರದೇಶದಲ್ಲಿ ಶನಿವಾರ ಹಾಗೂ ಭಾನುವಾರ ಮಳೆ ಮುಂದುವರೆಯಲಿದೆ. ಆನಂತರ ತೆಲಂಗಾಣ, ವಿದರ್ಭಾ, ಛತ್ತೀಸ್‌ಗಡ, ಮಧ್ಯಪ್ರದೇಶದಲ್ಲಿ ಆಗಸ್ಟ್ 16ರಿಂದ 18ರವರೆಗೂ ಮಳೆ ಮುಂದುವರೆಯುತ್ತದೆ ಎಂದು ಇಲಾಖೆ ಸೂಚನೆ ನೀಡಿದೆ.
ಆಗಸ್ಟ್ 16-17ರವರೆಗೂ ಒಡಿಶಾದಲ್ಲಿ, ತೆಲಂಗಾಣದಲ್ಲಿ ಆಗಸ್ಟ್ 17-18ರವರೆಗೂ ಮಳೆಯಾಗುತ್ತದೆ. ದೇಶದ ಉಳಿದ ಭಾಗಗಳಲ್ಲಿ ಚದುರಿದ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ. ತಮಿಳುನಾಡಿನಲ್ಲಿ ಆಗಸ್ಟ್ 14ರಂದು ಅಧಕ ಮಳೆಯಾಗಲಿದೆ. ಆನಂತರ ಇಲ್ಲಿ ಮಳೆ ಪ್ರಮಾಣ ತಗ್ಗಲಿದೆ ಎಂದು ತಿಳಿಸಿದೆ.
ಹಿಮಾಲಯದೆಡೆಗೆ ಮುಂಗಾರು ಚಲನೆಯಾಗಿದ್ದು, ಅಲ್ಲಿ ಅಧಿಕ ಮಳೆಯಾಗಲಿದೆ ಎಂದು ತಿಳಿಸಿದೆ. ಛತ್ತೀಸ್‌ಗಡದಲ್ಲಿ ಮತ್ತೊಂದು ಚಂಡಮಾರುತದ ಪ್ರಭಾವದಿಂದಾಗಿ ಮಳೆ ಮುಂದುವರೆಯುತ್ತಿದೆ. ಇಲ್ಲಿ ಆಗಸ್ಟ್ 17ರವರೆಗೂ ವ್ಯಾಪಕ ಮಳೆ ಬೀಳುವ ಸೂಚನೆ ನೀಡಲಾಗಿದೆ.
ಕರ್ನಾಟಕದಲ್ಲಿ ಕೂಡ ಆಗಸ್ಟ್ 18ರವರೆಗೂ ಮಳೆ ಮುಂದುವರೆಯುವುದಾಗಿ ತಿಳಿಸಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿದುಬಂದಿದೆ. ಕರ್ನಾಟಕದಲ್ಲಿ ಮುಂಗಾರು ದುರ್ಬಲವಾಗಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆಗಸ್ಟ್ 16ರವರೆಗೂ ಸಾಧಾರಣ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಒಳನಾಡಿನಲ್ಲಿ ಚದುರಿದ ಮಳೆ ಮುಂದುವರೆಯಲಿದೆ. ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿರುವುದಾಗಿ ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.