ಭಾರತ ತಂಡದ ಮತ್ತು ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನಯ್ ಕುಮಾರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಬಲಿಷ್ಠ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ (ಎಂಐ) ಸೇರಿಕೊಂಡಿದ್ದಾರೆ. ತಂಡದ ಟ್ಯಾಲೆಂಟ್ ಸ್ಕೌಟ್ ಆಗಿ ವಿನಯ್ ಅವರನ್ನು ಮುಂಬೈ ಗುರುವಾರ (ಜುಲೈ 29) ಹೆಸರಿಸಿದೆ.
ಬೌಲಿಂಗ್ ಆಲ್ ರೌಂಡರ್ ಆಗಿದ್ದ ವಿಜಯ್ ಕುಮಾರ್ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 17 ವರ್ಷಗಳ ವೃತ್ತಿ ಬದುಕು ಕಂಡಿದ್ದರು. ಕರ್ನಾಟಕ ತಂಡದ ನಾಯಕರೂ ಆಗಿದ್ದ ವಿನಯ್, ಎರಡು ಬಾರಿ ರಣಜಿ ಟ್ರೋಫಿ ಕೂಡ ಗೆದ್ದಿದ್ದರು. 2015 ಮತ್ತು 2017ರಲ್ಲಿ ಮುಂಬೈ ಇಂಡಿಯನ್ಸ್ ಗೆದ್ದಾಗ ಆ ತಂಡದಲ್ಲಿ ವಿನಯ್ ಕೂಡ ಇದ್ದರು.
2017ರಲ್ಲಿ ವಿನಯ್ ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದರು. 37ರ ಹರೆಯದ ವಿಜಯ್ ಕುಮಾರ್ ಮುಂಬೈ ಇಂಡಿಯನ್ಸ್‌ನ ನಿರ್ವಹಣಾ ಮಂಡಳಿ ಮತ್ತು ಕೋಚಿಂಗ್ ವಿಭಾಗದ ಜೊತೆಗಿದ್ದು ತಂಡಕ್ಕೆ ಬಲ ತುಂಬಲಿದ್ದಾರೆ.
ಎಂಐ ತಂಡದಲ್ಲಿ ಟ್ಯಾಲೆಂಟ್ ಸ್ಕೌಟ್ ಆಗಿ ವಿನಯ್ ಜೊತೆ ಪಾರ್ಥಿವ್ ಪಟೇಲ್ ಕೂಡ ಇರಲಿದ್ದಾರೆ.
ತಂಡದ ಟ್ಯಾಲೆಂಟ್ ಸ್ಕೌಟ್ ಆಗಿ ವಿನಯ್ ಆಯ್ಕೆಯಾಗಿರುವುದನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದೆ. “ಮುಂಬೈ ಇಂಡಿಯನ್ಸ್‌ಗೆ ಮತ್ತೆ ಸೇರಿಕೊಂಡಿರುವುದು ಖುಷಿಯಾಗಿದೆ,” ಎಂದು ಕುಮಾರ್ ಪ್ರತಿಕ್ರಿಯಿಸಿದ್ದಾರೆ.