ಮೂಗಜ್ಜನ ಕೋಳಿ ಎಂಬ ಮಕ್ಕಳ ಚಿತ್ರವು ಅರೆಭಾಷೆಯಲ್ಲಿ ನಿರ್ಮಿತವಾದ ಪ್ರಪ್ರಥಮ ಚಲನಚಿತ್ರವೆಂಬ ಕೀರ್ತಿಗೆ ಪಾತ್ರವಾಗಿದ್ದು ಇದೀಗ ಮೈಸೂರು ದಸರಾ ಚಲನಚಿತ್ರದಲ್ಲಿ ಪ್ರದರ್ಶನವಾಗಿದೆ. ಇದು ಅರೆಭಾಷೆಯು ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ವಾಸವಾಗಿರುವ ಹಲವರ ಆಡುಭಾಷೆಯಾಗಿದ್ದು, ಕರ್ನಾಟಕದಲ್ಲಿ ತನ್ನದೇ ಆದ ಅಕಾಡೆಮಿಯನ್ನ ಕೂಡಾ ಹೊಂದಿದೆ.
ಇನ್ನೂ ಕತೆಯ ಸಾರವನ್ನ ನೋಡೊದಾದ್ರೆ, ವಿದೇಶದಿಂದ ತನ್ನೂರಾದ ಸುಳ್ಯಕ್ಕೆ ಅಮ್ಮನ ಜೊತೆಗೆ ಆಗಮಿಸುವ ಕನಸು ಎಂಬ ಮುಗ್ಧ ಬಾಲಕಿಗೆ ಅಲ್ಲಿನ ಪರಿಸರವೆಲ್ಲವೂ ಹೊಸತಾದ ಕಾಣಿಸುತ್ತೆ. ಕಾರಣ ಅವಳು ಎಲ್ಲವನ್ನೂ ತನ್ನದೇ ದೃಷ್ಟಿಕೋನದಲ್ಲಿ ನೋಡಿ ಮುಗ್ಧಪ್ರಶ್ನೆಗಳನ್ನು ಕೇಳ್ತಾಳೆ. ನೆರೆಮನೆಯಲ್ಲಿರುವ ಮೂಗಜ್ಜ, ತನ್ನ ಕೋಳಿಗಳನ್ನು ಪ್ರೀತಿಯಿಂದ ಸಾಕುವುದನ್ನು ಕುತೂಹಲಭರಿತಳಾಗಿ ಗಮನಿಸುವ ಕನಸು, ಅವನ ಜೊತೆಗೆ ಫ್ರೆಂಡ್ ಶಿಪ್ ಬಯಸುತ್ತಾಳೆ.
ಮುಗ್ಧ ಮನಸ್ಸಿನ ಬಾಲಕಿ ಕನಸು ಹಾಗೂ ಕೋಳಿ ಸಾಕುವ ಮೂಗಜ್ಜನ ಮಧ್ಯೆ ನಡೆಯುವ ಸಾತ್ವಿಕ ಸಂಘರ್ಷ ಹಾಗೂ ಸಂಬಂಧದ ಕಥೆಯೇ ಮೂಗಜ್ಜನ ಕೋಳಿ.
ಮಕ್ಕಳ ಕಥೆಯ ಈ ಚಲನಚಿತ್ರಕ್ಕೆ ಹಲವಾರು ಪ್ರಶಸ್ತಿ, ಮನ್ನಣೆಗಳು ದೊರಕಿದ್ದು ಅವುಗಳಲ್ಲಿ ಪ್ರಮುಖವಾಗಿ ಹುಬ್ಬಳ್ಳಿಯಲ್ಲಿ ನಡೆದ 3ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕುಸಲ್ದರಸೆ ನವೀನ್ ಡಿ ಪಡೀಲ್ ಇವರಿಗೆ ಅತ್ಯುತ್ತಮ ನಟ ಪ್ರಶಸ್ತಿ, 23ನೇ UFMC ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೇಬಿ ಗೌರಿಕಾಳಿಗೆ ಉತ್ತಮ ಬಾಲನಟಿ ಪ್ರಶಸ್ತಿ, ಜಮ್ಮು ಕಾಶ್ಮೀರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ, ತಮೀಝಗಂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿದೆ. ಮಾತ್ರವಲ್ಲದೆ ಪ್ರತಿಷ್ಠಿತ ಕೊಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಜಾಗ್ರನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಇಟಲಿಯ ಫೆಸ್ಟಿವಲ್ ಡೆ ಸಿನೇಮ ಡಿ ಸಿಫಾಲು ಫಿಲಂ ಫೆಸ್ಟಿವಲ್, ಗೋಲ್ಡನ್ ಫೆಮಿ ಫಿಲ್ಮ್ ಫೆಸ್ಟಿವಲ್, ಸ್ಟೂಡೆಂಟ್ ವರ್ಲ್ಡ್ ಇಂಪಾಕ್ಟ್ ಫೀಲ್ಮ್ ಫೆಸ್ಟಿವಲ್, ಬಿರಿಸಮುಂಡ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಚಿತ್ರೋತ್ಸವ, 13ನೇ ಲಿಫ್ಟ್ ಆಫ್ ಗ್ಲೋಬಲ್ ನೆಟ್ವರ್ಕ್ ಫಿಲಂ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.
ಈ ಚಿತ್ರವನ್ನು ನಿರ್ದೇಶನ ಮಾಡಿದ ಶ್ರೀ ಸಂತೋಷ್ ಮಾಡರವರ ಮೊದಲ ಚಿತ್ರ ಜೀಟಿಗೆ ಎಂಬ ತುಳು ಚಲನಚಿತ್ರವು 68ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನು 2022ರಲ್ಲಿ ಗಳಿಸಿದೆ. ಇದರ ಜೊತೆಗೆ ಲಕ್ಕಿಬಾಬು, ಪಿದಾಯಿ ಎಂಬ ತುಳು ಚಿತ್ರವನ್ನೂ ಅವರು ನಿರ್ದೇಶನ ಮಾಡಿದ್ದಾರೆ.
ಚಿತ್ರದ ನಿರ್ಮಾಪಕರು ಶ್ರೀ ಕೆ.ಸುರೇಶ್. ಇವರು ನಮ್ಮ ಕನಸು ಪ್ರೊಡಕ್ಷನ್ಸ್ ಎಂಬ ಬ್ಯಾನರಿನಡಿಯಲ್ಲಿ ನಿರ್ಮಿಸಿರುವ ಚೊಚ್ಚಲ ಚಿತ್ರವೇ ಮೂಗಜ್ಜನ ಕೋಳಿ.
ಎರಡು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ, ಖ್ಯಾತ ಸಂಕಲನಕಾರ ಶ್ರೀ ಸುರೇಶ್ ಅರಸ್ ಇವರು ಚಿತ್ರದ ಸಂಕಲನ ಮಾಡಿದ್ದರೆ, ರಾಷ್ಟ್ರಪ್ರಶಸ್ತಿ ವಿಜೇತರಾದ ಖ್ಯಾತ ಮೇಕಪ್ ಮ್ಯಾನ್ ಶ್ರೀ ರಂಜಿತ್ ಅಂಬಾಡಿ ಸಹಕರಿಸಿದ್ದಾರೆ.
ಖ್ಯಾತ ಕನ್ನಡ ಸಾಹಿತಿಯಾದ ಶ್ರೀ ಸುಬ್ರಾಯ ಚೊಕ್ಕಾಡಿ ಈ ಚಿತ್ರದ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಕಥೆಯ ಕಲ್ಪನೆಯು ಶ್ರೀ ವಿನೀತ್ ವಟ್ಟಂಕುಳತ್ ಅವರದ್ದಾಗಿದ್ದರೆ, ಲೇಖಕರಾದ ಶ್ರೀ ರಮೇಶ್ ಶೆಟ್ಟಿಗಾರ್ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಸುಳ್ಯದ ಯುವ ಕವಯತ್ರಿ ಕುಮಾರಿ ರಮ್ಯಶ್ರೀ ನಡುಮನೆ ಇವರು ಅರೆಭಾಷೆಯ ಸಹಾಯ ನೀಡಿದ್ದಾರೆ. ಛಾಯಾಗ್ರಾಹಕರಾಗಿ ಪಿ. ವಿಷ್ಣುಪ್ರಸಾದ್, ಸಂಗೀತ ನಿರ್ದೇಶಕರಾಗಿ ಅರುಣ್ ಗೋಪಾನ್, ಹಿನ್ನಲೆ ಸಂಗೀತ ನಿರ್ದೇಶಕರಾಗಿ ದೀಪಾಂಕುರನ್, ಕಲಾನಿರ್ದೇಶಕರಾಗಿ ರಾಜೇಶ್ ಬಂದ್ಯೋಡು ಮುಂತಾದವರು ಸಹಕರಿಸಿದ್ದಾರೆ.
ತುಳುನಾಡಿನ ಹೆಸರಾಂತ ನಟ ಹಾಗೂ ಗುಂಡು ಮಾಮ ಖ್ಯಾತಿಯ ಕುಸಲ್ದರಸ ನವೀನ್ ಡಿ. ಪಡೀಲ್ ಇವರ ಮೂಗಜ್ಜನ ಪಾತ್ರವು ಚಿತ್ರದ ಮುಖ್ಯ ಆಕರ್ಷಣೆಯಾದರೆ ಮುಖ್ಯ ಭೂಮಿಕೆಯಾದ ಕನಸು [ಬಾಬೆಕ್ಕ] ಎಂಬ ಮಗುವಿನ ಪಾತ್ರದಲ್ಲಿ ಕುಮಾರಿ ಗೌರಿಕ ಮನೋಜ್ಞವಾಗಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಕನ್ನಡದ ಖ್ಯಾತ ನಟ-ನಟಿಯರಾದ ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯ ಮಂಗಳೂರು, ರಾಘವೇಂದ್ರ ಭಟ್, ಡಾ. ಜೀವನ್ ರಾಮ್ ಸುಳ್ಯ ಮುಂತಾದವರ ಜೊತೆಗೆ ಮಕ್ಕಳ ಪಾತ್ರಗಳಲ್ಲಿ ಡಾನ್ಸ್ ಕರ್ನಾಟಕ ಡಾನ್ಸ್, ಡ್ರಾಮಾ ಜೂನಿಯರ್ ಖ್ಯಾತಿಯ ಕುಮಾರಿ ಸಾನಿಧ್ಯ ಆಚಾರ್ಯ ಪೆರ್ಡೂರು, ಸುಳ್ಯ ನಿವಾಸಿಗಳಾದ ಸಾಯಿ ನಕ್ಷತ್ರ, ಲಾಸ್ಯ, ಲಾಲಿತ್ಯ, ಸ್ವರ, ಗೌರವ್, ಶಿವರಾಜ್, ಓಂಕಾರ್ ಹಾಗೂ ಲೇಖನ್ ನಟಿಸಿದ್ದಾರೆ.
ಶ್ರೀ ಡಾ. ಜೀವನ್ ರಾಮ್ ಸುಳ್ಯ ನಿರ್ದೇಶನ ಮಾಡಿದ “ಅಮರಸುಳ್ಯ ಸ್ವಾತಂತ್ರ್ಯ ಹೋರಾಟ 1837” ನಾಟಕದ ದೃಶ್ಯ ತುಣುಕುಗಳು ಕೂಡಾ ಈ ಚಿತ್ರದಲ್ಲಿದೆ. ಇದರಿಂದ ಅಮರಸುಳ್ಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇಡೀ ಜಗತ್ತಿಗೆ ಇನ್ನಷ್ಟು ಮಾಹಿತಿ ದೊರಕಿದಂತಾಗಿದೆ. ಸುಳ್ಯ ಪೇಟೆ, ಕೇರ್ಪಳ, ಕುಡೆಕಲ್ಲು, ಪದ್ಮಶ್ರೀ ಗಿರೀಶ್ ಭಾರಧ್ವಜ್ ಇವರು ನಿರ್ಮಿಸಿದ ತೂಗು ಸೇತುವೆಗಳು, ಹೀಗೆ ಈ ಚಿತ್ರದ ಪೂರ್ತಿ ಚಿತ್ರೀಕರಣವು ಸುಳ್ಯದ ಸುತ್ತಮುತ್ತಲು ನಡೆದಿದೆ.