ಮೈಸೂರು ವಿವಿ: ತೃತೀಯ ಲಿಂಗಿಗಳಿಗೆ ಸೀಟು ಮೀಸಲು

0
66

ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಸೀಟು ಮೀಸಲಿಡುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಇನ್ನು ಮುಂದೆ ತೃತೀಯ ಲಿಂಗಿ ವಿದ್ಯಾರ್ಥಿಗಳು ನೆಮ್ಮದಿಯಾಗಿ ವ್ಯಾಸಂಗ ಮಾಡಬಹುದಾಗಿದೆ.
ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಕ್ರಾಫರ್ಡ್ ಭವನದ ಸಿಂಡಿಕೇಟ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಹೆಚ್ಚು ಪ್ರಚಾರ ಮಾಡಲು ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ.


ಈ ಕುರಿತು ಮಾಹಿತಿ ನೀಡಿರುವ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್, “ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಇಚ್ಛಿಸುವ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಕಳೆದ ಕೆಲ ವರ್ಷಗಳಿಂದಲೂ ಸೀಟು ಮೀಸಲಿರಿಸಲಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಪ್ರಚಾರ ಇಲ್ಲದ ಕಾರಣ ತೃತೀಯ ಲಿಂಗಿಗಳು ಇದರ ಪ್ರಯೋಜನ ಪಡೆಯುವಲ್ಲಿ ವಿಫಲವಾಗುತ್ತಿದ್ದಾರೆ” ಎಂದು ಹೇಳಿದ್ದಾರೆ.
“ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಸೀಟು ಮೀಸಲು ಕುರಿತಂತೆ ಹೆಚ್ಚಿನ ಪ್ರಚಾರ ಮಾಡುವಂತೆ ಸಿಂಡಿಕೇಟ್ ಸದಸ್ಯೆ ಡಾ. ಚೈತ್ರ ನಾರಾಯಣ್ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಚರ್ಚಿಸಿದ ಸಿಂಡಿಕೇಟ್, ತೃತೀಯ ಲಿಂಗಿಗಳಿಗೆ ಸೀಟು ಮೀಸಲಿಟ್ಟಿರುವ ಬಗ್ಗೆ ಅಗತ್ಯ ಪ್ರಚಾರ ಕೈಗೊಂಡು ಯೋಜನೆ ಉದ್ದೇಶ ಸದುಪಯೋಗವಾಗುವಂತೆ ನೋಡಿಕೊಳ್ಳಲಾಗುತ್ತಿದೆ” ಎಂದು ತಿಳಿಸಿದರು.


ಇನ್ನು ಮುಂದೆ ವಿವಿ, ವಿದ್ಯಾರ್ಥಿಗಳ ಪ್ರವೇಶಾತಿ ಸಂದರ್ಭದಲ್ಲಿ ಈ ಸೀಟು ಮೀಸಲು ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಮತ್ತು ತೃತೀಯ ಲಿಂಗಿ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತಂತೆ ಸಿಂಡಿಕೇಟ್ ತೀರ್ಮಾನ ಕೈಗೊಂಡಿದೆ.
ಇದರಿಂದಾಗಿ ತೃತೀಯ ಲಿಂಗಿ ವಿದ್ಯಾರ್ಥಿಗಳು ಮೀಸಲು ಸೀಟು ಯೋಜನೆಯನ್ನು ಸದುಪಯೋಗಿಸಿಕೊಂಡು ತಮ್ಮ ವ್ಯಾಸಂಗವನ್ನು ಮುಂದುವರೆಸಲು ಅವಕಾಶ ದೊರೆತಂತಾಗಿದೆ.

LEAVE A REPLY

Please enter your comment!
Please enter your name here