ಈರುಳ್ಳಿ ಭರ್ಜರಿ ದ್ವಿಶತಕ ಬಾರಿಸಿದೆ. ಸದ್ಯಕ್ಕೆ ತನ್ನ ಬೆಲೆ ಕಡಿಮೆ ಆಗುವ ಪ್ರಶ್ನೆಯೇ ಇಲ್ಲ ಎಂದು ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಈ ಈರುಳ್ಳಿ ದರದ ಹೆಚ್ಚಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೀವು ಅನೇಕ ವಿಡಿಯೋಗಳನ್ನು ನೋಡಿ, ಟ್ರೋಲ್ ಗಳನ್ನು ಕಂಡು ನಕ್ಕು ನಕ್ಕು ನಕ್ಕು ಸುಸ್ತಾಗರ್ತೀರಿ. ಮದುವೆಗೆ ಈರುಳ್ಳಿ ಗಿಫ್ಟ್ ಕೊಟ್ಟಿರುವ ವಿಡಿಯೋ ಕೂಡ ನೋಡರ್ತೀರಿ. ಆದರೆ ಒಂದು ಮೊಬೈಲ್ಗೆ 1 ಕೆ ಜಿ ಈರುಳ್ಳಿ ಫ್ರೀ ಬಗ್ಗೆ ತಿಳಿದಿದ್ದೀರಾ? ಇಂತಹದ್ದೊಂದು ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಮಾಡಿರುವುದು ಚೆನ್ನೈ ನ ಮೊಬೈಲ್ ಶಾಪ್ ಮಾಲೀಕರೊಬ್ಬರು.
ಗಗನಕ್ಕೇರಿರುವ ಈರುಳ್ಳಿ ಬೆಲೆಯನ್ನೇ ಬಂಡವಾಳ ಮಾಡಿಕೊಂಡು ತಮಿಳುನಾಡಿನ ಮೊಬೈಲ್ ಮಾರಾಟಗಾರರೊಬ್ಬರು ಇದನ್ನೇ ಫೋನ್ ಸೇಲ್ ಮಾಡುತ್ತಿದ್ದಾರೆ.
ತಂಜಾವೂರು ಜಿಲ್ಲೆಯ ಪಟ್ಟುಕೊಟೈನ ತಲಯಾರಿ ಸ್ಟ್ರೀಟ್ ನಲ್ಲಿರುವ ಎಸ್ ಆರ್ ಸರ್ವಿಸ್ ಸೆಂಟರಿನ ಮಾಲೀಕ, ಅಂಗಡಿಯಲ್ಲಿ ಮೊಬೈಲ್ ಕೊಂಡರೆ ಒಂದು ಕೆ ಜಿ ಈರುಳ್ಳಿ ಉಚಿತವಾಗಿ ನೀಡುವುದಾಗಿ ಅನೌನ್ಸ್ ಮಾಡಿದ್ದಾರೆ. ತಮಿಳುನಾಡಿನಲ್ಲಿ ಸದ್ಯ ಈರುಳ್ಳಿ ಕೆ.ಜಿಗೆ 140 ರಿಂದ 160 ರೂ ಇದೆ. ಈ ಆಫರ್ ಜನರಿಗೆ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಎಲ್ಲಾ ಕಡೆಗಳಲ್ಲಿ ಇದು ವೈರಲ್ ಆಗುತ್ತಿದೆ.