ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಮೋಂಥಾ ಚಂಡಮಾರುತದ ಪ್ರಭಾವದಿಂದ ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಗುಡುಗು-ಮಿಂಚು ಸಹಿತ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಚಂಡಮಾರುತದ ಪ್ರಭಾವ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳ ಮೇಲೆ ತೀವ್ರವಾಗಿದ್ದು, ಇಂದಿನಿಂದ ನವೆಂಬರ್ 2ರವರೆಗೆ ವ್ಯಾಪಕ ಮಳೆಯ ಚಟುವಟಿಕೆ ಮುಂದುವರಿಯಲಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಹೆಚ್ಚಿದ್ದು, ನದಿ ತೀರ ಪ್ರದೇಶಗಳ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆಯವರೆಗೂ ಮಳೆ ಬೀಳದಿದ್ದರೂ ಯಾವುದೇ ಕ್ಷಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯಾದ್ಯಂತ ಮೋಂಥಾ ಚಂಡಮಾರುತದ ಪರಿಣಾಮದಿಂದ ಮುಂದಿನ ನಾಲ್ಕು ದಿನಗಳು ಮಳೆ ಹಾಗೂ ಗುಡುಗು-ಮಿಂಚಿನ ಚಟುವಟಿಕೆಗಳು ತೀವ್ರವಾಗಲಿವೆ, ಆದ್ದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆ ಸಲಹೆ ನೀಡಿದೆ.



