ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ರಾಜೇಂದ್ರ ಸ್ವಾಮೀಜಿಯವರಿಗೆ ಚುನಾವಣಾ ಆಯೋಗ ನೊಟೀಸ್ ನೀಡಿದೆ. ಕೆಲವು ದಿನಗಳ ಹಿಂದೆ ಪ್ರಧಾನಿಯಾಗಿ ನರೇಂದ್ರ ಮೋದಿಯವರೇ ಮುಂದುವರಿಯಲಿದ್ದಾರೆಂದು ಪರೋಕ್ಷವಾಗಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಈ ಕಾರಣಕ್ಕಾಗಿ ಶ್ರೀಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ. ಶ್ರೀಗಳು ನುಡಿಯುವ ಭವಿಷ್ಯ ಮತದಾರನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ನೊಟೀಸ್ ಜಾರಿ ಮಾಡಿರುವುದಾಗಿ ಚುನಾವಣಾ ಅಧಿಕಾರಿ ಶಂಕರಗೌಡ ಅವರು ಹೇಳಿದ್ದಾರೆ.
ನೀತಿಸಂಹಿತೆ ಜಾರಿಯಲ್ಲಿದೆ, ಆದರೂ ನೀವು ಚುನಾವಣಾ ಕಾನೂನು ಉಲ್ಲಂಘಿಸಿದ್ದೀರಿ, 48 ಗಂಟೆಯೊಳಗಾಗಿ ನೊಟೀಸ್ ಗೆ ಉತ್ತರ ನೀಡುವಂತೆ ಶ್ರೀಗಳಿಗೆ ಸೂಚಿಸಲಾಗಿದೆ ಎಂದು ಶಂಕರಗೌಡ ಹೇಳಿದ್ದಾರೆ. ಯಾದಗಿರಿಯಲ್ಲಿ ಶ್ರೀ ವಿಶ್ವಾರಾಧ್ಯರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಕೋಡಿಶ್ರೀಗಳು, “ಪಾಂಡವರು ಮತ್ತು ಕೌರವರು ಬಡಿದಾಡುವರು, ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ. ಬೇವು ಬೆಲ್ಲವಾದೀತು, ಸತ್ಯ ವಿಷದಂತೆ ಇರುತ್ತದೆ” ಎನ್ನುವ ಭವಿಷ್ಯವನ್ನು ಶ್ರೀಗಳು ನುಡಿದಿದ್ದರು. ಕಾಲಜ್ಞಾನ ಬ್ರಹ್ಮ ಸದ್ಗುರು ಸ್ವಾಮೀಜಿ ನುಡಿದ ಪ್ರಧಾನಿ ಮೋದಿಯ ಭವಿಷ್ಯ ರತ್ನಖಚಿತ ಸುವರ್ಣ ಕಿರೀಟ ಎನ್ನುವುದು ಪ್ರಧಾನಮಂತ್ರಿ ಹುದ್ದೆ, ಸ್ಥಿರವಾಗಿರುತ್ತದೆ ಎಂದರೆ
ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿ ಎಂದು ಕೋಡಿಶ್ರೀಗಳ ಭವಿಷ್ಯವನ್ನು ವ್ಯಾಖ್ಯಾನಿಸಲಾಗಿತ್ತು.