ಬೆಂಗಳೂರು:ಇಂದು ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ಮೋದಿ, ಪರಿಸ್ಥಿತಿಗೆ ಅನುಗುಣವಾಗಿ ಲಾಕ್ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಇದರಿಂದ ಉತ್ತೇಜನಗೊಂಡ ಮೂರು ಜಿಲ್ಲೆಗಳ ಡಿಸಿಗಳು ಇಂದು ಕಂಪ್ಲೀಟ್ ಲಾಕ್ ಮಂತ್ರವನ್ನು ಜಪಿಸಿದ್ದಾರೆ.
ವಾರದಲ್ಲಿ ನಾಲ್ಕು ದಿನ, ಐದು ದಿನ, ಇಡೀ ವಾರ ಕಠಿಣ ನಿರ್ಬಂಧಗಳನ್ನು ಹೇರುವ ಮೂಲಕ ಹಳ್ಳಿಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಸೋಂಕಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಇದೆಲ್ಲವನ್ನು ನೋಡ್ತಿದ್ರೆ ಮುಂದಿನ ದಿನಗಳಲ್ಲಿ ತಾಲೂಕುಗಳು ಪ್ರತ್ಯೇಕ ಲಾಕ್ ಮಾಡಿಕೊಂಡರೂ ಅಚ್ಚರಿ ಇಲ್ಲ.
ಹಾಸನ: ವಾರದಲ್ಲಿ 4 ದಿನ ಸಂಪೂರ್ಣ ಲಾಕ್‍ಡೌನ್ ಘೋಷಣೆಯಾಗಿದ್ದು, ಮಂಗಳವಾರ, ಗುರುವಾರ, ಶನಿವಾರ, ಭಾನುವಾರ ಲಾಕ್ ಆಗಲಿದೆ. ಉಳಿದ 3 ದಿನ ಮಾತ್ರ ಜನತಾ ಲಾಕ್‍ಡೌನ್
ಕಲಬುರಗಿ: ವಾರದಲ್ಲಿ 3 ದಿನ ಕಂಪ್ಲೀಟ್ ಲಾಕ್‍ಡೌನ್. ಗುರುವಾರ, ಶುಕ್ರವಾರ ಶನಿವಾರ ಸಂಪೂರ್ಣ ಬಂದ್ (ಹೋಟೆಲ್‍ನಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ). ಭಾನು, ಸೋಮ, ಮಂಗಳ, ಬುಧವಾರ ಜನತಾ ಲಾಕ್.
ಬಳ್ಳಾರಿ: ನಾಳೆಯಿಂದ ಐದು ದಿನ ಕಂಪ್ಲೀಟ್ ಲಾಕ್‍ಡೌನ್. ಮೇ 24ರ ಬೆಳಿಗ್ಗೆ ಆರು ಗಂಟೆವರೆಗೆ ಸಂಪೂರ್ಣ ಬಂದ್. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರಲ್ಲ.
ಚಾಮರಾಜನಗರದ ನಾಗವಳ್ಳಿ ಗ್ರಾಮಸ್ಥರು ಸೆಲ್ಫ್ ಲಾಕ್ ಮಾಡ್ಕೊಂಡಿದ್ದಾರೆ. ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ, ಹೊರಗಿನವರಿಗೆ ಪ್ರವೇಶ ನಿರ್ಬಂಧಿಸಿದ್ದಾರೆ. ಗ್ರಾಮದಿಂದ ಯಾರು ಕೂಡ ಬೇರೆ ಊರಿಗೆ ಹೋಗುವಂತಿಲ್ಲ. ಬೆಂಗಳೂರಿನಿಂದ ಬರುವವರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ರಿಪೋರ್ಟ್ ತರಬೇಕಿದೆ. ರಸ್ತೆಗೆ ಬ್ಯಾರೀಕೇಡ್ ಹಾಕಿರು ಗ್ರಾಮಸ್ಥರು ಗ್ರಾಮದಲ್ಲಿ ಯಾರು ಗುಂಪು ಗೂಡುವಂತಿಲ್ಲ. ಮಾಸ್ಕ್ ಧರಿಸದೇ ಹೊರಬರುವಂತಿಲ್ಲ ಎಂಬ ಆದೇಶ ಹೊರಡಿಸಿದ್ದಾರೆ.