ಬಿಜೆಪಿ ಹೈಕಮಾಂಡ್ ನಿಂದ ಯಡಿಯೂರಪ್ಪಗೆ ಬಂದಿರುವ ಸೂಚನೆಯ ಪ್ರಕಾರ ಈಗ ಸಚಿವ ಸ್ಥಾನ ಸಿಗದಿರುವ ಕಾರಣಕ್ಕೆ ಅಸಮಾಧಾನಗೊಂಡಿರುವ ಶಾಸಕರ ಒತ್ತಡಕ್ಕೆ ಮಣಿದರೆ ಮುಂದೆ ಪಕ್ಷದಲ್ಲಿ ಇನ್ನೊಂದು ರೀತಿಯ ಬಣಗಳು ಸೃಷ್ಟಿಯಾಗುತ್ತವೆ. ಪ್ರಾರಂಭದಲ್ಲೇ ಇದನ್ನು ಚಿವುಟಿ ಹಾಕಬೇಕೆಂದು ಹೈಕಮಾಂಡ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಹೈಕಮಾಂಡ್‍ನಿಂದಲೇ ಸಂಪೂರ್ಣ ಬೆಂಬಲ ಸಿಗುತ್ತಿರುವ ಹಿನ್ನೆಲೆಯಲ್ಲಿ ಬಿಎಸ್‍ವೈ ಯಾವುದೇ ಶಾಸಕರ ಒತ್ತಡಕ್ಕೆ ಕ್ಯಾರೆ ಎನ್ನುತ್ತಿಲ್ಲ. ಮಂಗಳವಾರ ಮಧ್ಯಾಹ್ನದಿಂದಲೇ ಅಸಮಾಧಾನಿತರ ಜೊತೆ ಹಂತ ಹಂತವಾಗಿ ಮಾತುಕತೆ ಮೂಲಕ ಸಮಾಧಾನಪಡಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಶಾಸಕರಾದ ರೇಣುಕಾಚಾರ್ಯ, ಉಮೇಶ್‍ಕತ್ತಿ, ಬಾಲಚಂದ್ರ ಜಾರಕಿ ಹೊಳಿ, ಮುರುಗೇಶ್‍ನಿರಾಣಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್ ಸೇರಿದಂತೆ ಅನೇಕರ ಜೊತೆ ಈಗಾಗಲೇ ಸಭೆ ನಡೆಸಿ ಯಾವುದೇ ರೀತಿಯ ಪಕ್ಷವಿರೋಧಿ ಚಟುವಟಿಕೆ ಇಲ್ಲವೆ, ಭಿನ್ನಮತ ನಡೆಸಬಾರದೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಅನಗತ್ಯವಾಗಿ ಪ್ರತ್ಯೇಕ ಸಭೆಗಳನ್ನು ನಡೆಸುವುದು, ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಮುಜುಗರ ಸೃಷ್ಟಿಸುವುದು ಮಾಡಬಾರದು. ಕ್ಷೇತ್ರದಲ್ಲಿ ಏನೇ ಕೆಲಸ, ಕಾರ್ಯಗಳಿದ್ದರೂ ನಾನು ಮಾಡಿಕೊಡುತ್ತೇನೆ. ಆದರೆ ಸರ್ಕಾರಕ್ಕೆ, ಇಲ್ಲವೆ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಿದರೆ ಸಹಿಸುವುದಿಲ್ಲ. ರಾಜ್ಯದಲ್ಲಿ ಈಗಾಗಲೇ ಅತಿವೃಷ್ಟಿಯಿಂದಾಗಿ ಸಾಕಷ್ಟು ಜನರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.