ಕೊನೆಗೂ ಮಂಡ್ಯ ಚುನಾವಣಾ ಕಣದಲ್ಲಿ ಬಿರುಗಾಳಿ ಎದ್ದಿದೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುವುದು ಖಚಿತವಾಗಿದೆ, ಸುಮಲತಾ ಅಂಬರೀಷ್ ಅವರು ಪಕ್ಷೇತರಾಗಿ ಸ್ಪರ್ದಿಸುವುದರ ಮೂಲಕ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಇದರ ಸಲುವಾಗಿ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಸುದ್ದಿಗೋಷ್ಠಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಆಗಮಿಸಿದ ಸುಮಲತಾ ”ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ” ಎಂದು ಘೋಷಣೆಯನ್ನು ಮಾಡುವುದರ ಮೂಲಕ ಮಂಡ್ಯ ಚುನಾವಣಾ ಕಣಕ್ಕೆ ಕಿಚ್ಚನ್ನು ಹೊತ್ತಿಸಿದ್ದಾರೆ.
ನಾವಿಲ್ಲಿ ಕಲಾವಿದರಾಗಿ ಬಂದಿಲ್ಲ, ಸುಮಲತಾ ಅಂಬರೀಷ್ ಅವರ ಮನೆಮಕ್ಕಳಾಗಿ ಕುಳಿತಿದ್ದೇವೆ- ಸುಮಲತಾ ಅವರ ಎಡ-ಬಲದಲ್ಲಿ ಕುಳಿತಿದ್ದ ಯಶ್ ಮತ್ತು ದರ್ಶನ್ ಅವರ ಒಮ್ಮತದ ಹೇಳಿಕೆಯಾಗಿತ್ತು.
ಈ ವೇಳೆ ಮಾತನಾಡಿದ ಯಶ್, ನಾವು ಕಲಾವಿದರಾಗಿ ಕುಳಿತಿಲ್ಲ. ಮನೆಮಕ್ಕಳಾಗಿ ಕುಳಿತಿದ್ದೇವೆ. ನನಗಿಂತ ಹಿರಿಯರಾದ ದರ್ಶನ್ ಅವರು ಇಲ್ಲೇ ಇದ್ದಾರೆ ನಾವು ಅವರನ್ನು ನೋಡಿ ಬೆಳೆದವರು ಎಂದು ತಮ್ಮ ಮಾತನ್ನು ಆರಂಭಿಸಿದ ರಾಕಿಂಗ್ ಸ್ಟಾರ್ ಎಷ್ಟೋ ಜನರು ಕಲಾವಿದರಿಗೆ ಪ್ರೀತಿ ಹಂಚಿರುವ ಮಹಾನುಭಾವ ಅಂಬರೀಷ್. ಅವರು ಇಲ್ಲ ಎಂಬ ನೋವಿದೆ. ಅವರೆಡೆಗಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಮಂಡ್ಯ ಜನಕ್ಕೆ ಅಂಬರೀಷ್ ಎಂದರೆ ಏನು ಎಂದು ಗೊತ್ತಿದೆ.
ಅಷ್ಟು ವರ್ಷ ಮಂಡ್ಯ ಜನರ ಪ್ರೀತಿ ಗಳಿಸುವುದು ಸುಲಭವಲ್ಲ. ಮಂಡ್ಯ ಎಂದರೆ ಅಂಬರೀಷಣ್ಣ ಎಂದೇ ಹೆಸರು. ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಯಾವುದೋ ಸ್ವಾರ್ಥಕ್ಕಾಗಿ ಅಲ್ಲ. ಮಂಡ್ಯದ ನಂಟನ್ನು ಕಡಿದುಕೊಳ್ಳಲು ಸಾಧ್ಯವಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅಂಬರೀಷಣ್ಣ ಅವರ ನೆನಪು ಇರುತ್ತದೆ. ಅದು ಮಂಡ್ಯ ಜನರ ಮನಸಿನಲ್ಲಿದೆ. ಅಂಬರೀಷ್ ಅವರ ಕುಟುಂಬದವರೆಂದು ಸುಮಲತಾ ಅವರು ಸ್ಪರ್ಧಿಸುತ್ತಿಲ್ಲ. ಅವರಿಗೆ ಯೋಗ್ಯತೆ ಇದೆ ಎಂದು ಭಾವಿಸಿದ್ದೇನೆ. ಅಂಬರೀಷಣ್ಣ ಅವರ ನಂಟಿನ ಕಾರಣಕ್ಕೆ ಮಂಡ್ಯದ ಜನರ ಒತ್ತಾಯ ಇದೆ. ಆದರೆ, ಸುಮಲತಾ ಅವರಿಗೆ ಅದದಕ್ಕೂ ಮೀರಿದ ಶಕ್ತಿ ಇದೆ. ಅವರಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಜ್ಞಾನವಿದೆ. ನಾವಂತೂ ಜತೆಗಿರುತ್ತೇವೆ.
ಅವರು ಯಾವ ಮಟ್ಟಕ್ಕೆ ನಿಲ್ಲುತ್ತಾರೋ ಆ ಮಟ್ಟಕ್ಕೆ ನಿಲ್ಲುತ್ತೇವೆ. ನಮ್ಮ ಮನೆಯಲ್ಲಿ ತಾಯಿ ನಿರ್ಧಾರ ತೆಗೆದುಕೊಂಡ ಹಾಗೆ ನಾವೂ ಇರುತ್ತೇವೆ. ಸುಮಲತಾ ಅವರಿಗೆ ಚುನಾವಣೆಯಲ್ಲಿ ನಿಲ್ಲುವ ನಿಂತು ಗೆಲ್ಲುವ ಜನರ ಸೇವೆಯನ್ನು ಮಾಡುವ ಯೋಗ್ಯತೆ ಇದೆ ಎಂದು ಯಶ್ ಹೇಳಿದ್ದಾರೆ.