ಕ್ರೀಡಾಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಏಪ್ರಿಲ್ 9ರಂದು ಶುರುವಾಯಿತು. ಟೂರ್ನಿ ಶುರುವಾದಾಗಿನಿಂದ ಇಲ್ಲಿಯವರೆಗೂ 29 ಲೀಗ್ ಹಂತದ ಪಂದ್ಯಗಳು ಮುಗಿದಿದ್ದು ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಕ್ರೇಜ್ ತುಸು ಕಡಿಮೆ ಎಂದೇ ಹೇಳಬಹುದು. ಇದಕ್ಕೆಲ್ಲಾ ಕಾರಣ ಕೊರೊನಾ ವೈರಸ್, ಹೌದು ಕೊರೊನಾವೈರಸ್ ಕಾರಣದಿಂದಾಗಿ ಕ್ರೀಡಾಂಗದಲ್ಲಿ ಪಂದ್ಯವನ್ನು ವೀಕ್ಷಿಸಲು ವೀಕ್ಷಕರಿಗೆ ಅವಕಾಶ ನೀಡಿಲ್ಲ ಹೀಗಾಗಿ ಈ ಹಿಂದಿನ ಆವೃತ್ತಿಗಳಿಗೆ ಇದ್ದಂತಹ ಕ್ರೇಜ್ ಪ್ರಸ್ತುತ ಐಪಿಎಲ್ ಆವೃತ್ತಿಗೆ ದೊರಕಿಲ್ಲ.
ಇನ್ನು ದೇಶದ ಜನತೆ ಕೊರೊನಾವೈರಸ್ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದು ಐಪಿಎಲ್ ವೀಕ್ಷಿಸುವವರ ಸಂಖ್ಯೆ ಕೂಡ ಕಡಿಮೆ ಎಂಬುದು ಇಲ್ಲಿಯವರೆಗೂ ನಡೆದಿರುವ ಪಂದ್ಯಗಳಿಗೆ ಬಂದಿರುವ ಆನ್‌ಲೈನ್ ವೀಕ್ಷಣೆಗಳ ಸಂಖ್ಯೆಯನ್ನು ನೋಡಿದರೆ ತಿಳಿಯುತ್ತದೆ. ಹಾಗೂ ಇತ್ತೀಚಿನ ಕೆಲ ದಿನಗಳಿಂದ ದೇಶ ಸಂಕಷ್ಟದಲ್ಲಿರುವಾಗ ಐಪಿಎಲ್ ಬೇಕಾ ಎಂಬ ಪ್ರಶ್ನೆಗಳು ಸಹ ಕೇಳಿಬರುತ್ತಿವೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್‌ಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಸೋಮವಾರ (ಮೇ 3) ನಡೆಯಬೇಕಿದ್ದ ಬೆಂಗಳೂರು ಮತ್ತು ಕೊಲ್ಕತ್ತಾ ನಡುವಿನ ಪಂದ್ಯ ಕೂಡ ಮುಂದೂಡಲ್ಪಟ್ಟಿದೆ. ಅಷ್ಟೇ ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂವರು ಸದಸ್ಯರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಇಷ್ಟೆಲ್ಲಾ ಬೆಳವಣಿಗೆಗಳು ಆದ ನಂತರ ಇದೀಗ ಐಪಿಎಲ್ ಟೂರ್ನಿಯನ್ನು ರದ್ದು ಮಾಡಿ ಎಂಬ ಟ್ವಿಟರ್ ಅಭಿಯಾನ ಶುರುವಾಗಿದೆ. ಹೌದು ದಿನದಿಂದ ದಿನಕ್ಕೆ ಐಪಿಎಲ್ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಐಪಿಎಲ್ ಟೂರ್ನಿಯನ್ನು ರದ್ದುಗೊಳಿಸಬೇಕೆಂದು ಟ್ವಿಟರ್ ಟ್ರೆಂಡ್ ನಡೆಯುತ್ತಿದೆ. ಇನ್ನೂ ಕೆಲವು ನೆಟ್ಟಿಗರು ಈ ವಿಷಯವನ್ನು ಹಾಸ್ಯಾಸ್ಪದವಾಗಿ ಕೂಡ ಟ್ರೆಂಡ್ ಮಾಡುತ್ತಿದ್ದಾರೆ. ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನದಲ್ಲಿರುವ ತಂಡಗಳ ಅಭಿಮಾನಿಗಳು ಐಪಿಎಲ್ ನಡೆಯಲಿ ಎಂದು ಬೇಡಿಕೊಳ್ಳುತ್ತಿದ್ದರೆ, ಕೆಳಮಟ್ಟದಲ್ಲಿರುವ ತಂಡದ ಅಭಿಮಾನಿಗಳು ಹೇಗಿದ್ದರೂ ನಮ್ಮ ತಂಡ ಪ್ಲೇಆಫ್‌ಗೆ ಹೋಗುವುದು ಅನುಮಾನ ಹೀಗಾಗಿ ಐಪಿಎಲ್ ಟೂರ್ನಿಯನ್ನು ರದ್ದು ಮಾಡಿ ಎಂದು ಹಾಸ್ಯಾಸ್ಪದ ರೀತಿಯಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.