ಆಸ್ಟ್ರೇಲಿಯಾ ನೆಲದಲ್ಲಿ ಟೀಮ್ ಇಂಡಿಯಾಗೆ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಸರಣಿ ಗೆಲುವು ತಂದು ಕೊಟ್ಟರೂ ನಾಯಕತ್ವದ ಶ್ರೇಯಸ್ಸನ್ನು ತಂಡದ ಸಂಘಟಿತ ಹೋರಾಟಕ್ಕೆ ಅರ್ಪಿಸಿದ ಅಜಿಂಕ್ಯ ರಹಾನೆ ಅಭಿಮಾನಿಗಳ ಮನ ಗೆದ್ದಿದ್ದಾರೆ.
0-1 ಅಂತರದ ಹಿನ್ನಡೆ ಅನುಭವಿಸಿದ್ದ ತಂಡದ ಸಾರಥ್ಯ ವಹಿಸಿಕೊಂಡ ಅಜಿಂಕ್ಯ ರಹಾನೆ ಸರಣಿಯಲ್ಲಿ ಉಳಿದ 3 ಪಂದ್ಯಗಳಲ್ಲಿ 2 ಜಯ ಮತ್ತೊಂದು ಪಂದ್ಯದಲ್ಲಿ ಡ್ರಾ ಫಲಿತಾಂಶ ತಂದುಕೊಡುವ ಮೂಲಕ ಕಾಂಗರೂ ನಾಡಲ್ಲಿ ಭಾರತ ಮತ್ತೊಮ್ಮೆ ಟೆಸ್ಟ್ ಸರಣಿ ಗೆಲುವಿನ ವಿಜಯೋತ್ಸವ ಆಚರಿಸುವತೆ ಮಾಡಿದ್ದಾರೆ.
ಈ ಬಗ್ಗೆ ಗಬ್ಬಾ ಟೆಸ್ಟ್ ಮುಕ್ತಾಯದ ಬಳಿಕ ಮಾತನಾಡಿದ ಅಜಿಂಕ್ಯ “ರಾಷ್ಟ್ರೀಯ ತಂಡವನ್ನು ಮುನ್ನಡೆಸುವುದಕ್ಕಿಂತಲೂ ದೊಡ್ಡ ಗೌರವ ಮತ್ತೊಂದಿಲ್ಲ. ಇಲ್ಲಿ ನಾನು ಎಂಬುದಲ್ಲ ತಂಡ ಎಂಬುದೇ ಮುಖ್ಯ. ನಾಯತ್ವದಲ್ಲಿ ನಾನು ಉತ್ತಮವಾಗಿ ಕಾಣಿಸಲು ತಂಡದ ಎಲ್ಲಾ ಆಟಗಾರರು ನೀಡಿದ ಶ್ರೇಷ್ಠ ಪ್ರದರ್ಶವೇ ಕಾರಣ. ಅಂಗಣದಲ್ಲಿ ಇಳಿದು ಗೆಲ್ಲುವ ಆತ್ಮವಿಶ್ವಾಸ ತೋರುವುದು, ಹೋರಾಡುವ ಮನೋಭಾವ ಪ್ರದರ್ಶಿಸುವುದೇ ಮುಖ್ಯ,” ಎಂದು ತಮ್ಮ ನಾಯಕತ್ವದ ಬಗ್ಗೆ ರಹಾನೆ ಮನ ಮುಟ್ಟುವ ಮಾತುಗಳನ್ನಾಡಿದ್ದಾರೆ.
“ಅಡಿಲೇಡ್ ಟೆಸ್ಟ್ ಬಳಿಕ ಬಹಳಾ ಕಷ್ಟದ ಸ್ಥಿತಿ ಎದುರಾಗಿತ್ತು. ಈ ಸಂದರ್ಭದಲ್ಲಿ ಹೋರಾಟದ ಮನೋಭಾವ ಪ್ರದರ್ಶಿಸುವುದೇ ಮುಖ್ಯವಾಗಿತ್ತು. ಫಲಿತಾಂಶದ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಉತ್ತಮ ಕ್ರಿಕೆಟ್ ಆಡುವುದಷ್ಟೇ ನಮ್ಮ ಗುರಿಯಾಗಿತ್ತು. ಸಹಾಯಕ ಸಿಬ್ಬಂದಿಯನ್ನೂ ಒಳಗೊಂಡಂತೆ ಸಂಪೂರ್ಣ ತಂಡಕ್ಕೆ ಇದರ ಶ್ರೇಯಸ್ಸು ಸಿಗಬೇಕು,” ಎಂದಿದ್ದಾರೆ.
ಭಾರತ ತಂಡ ಫೆಬ್ರವರಿ 5ರಿಂದ ಸ್ವದೇಶದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿ ಸಲುವಾಗಿ ಬಿಸಿಸಿಐ ಮೊದಲ ಎರಡು ಪಂದ್ಯಗಳಿಗೆ 18 ಸದಸ್ಯರ ಭಾರತ ತಂಡವನ್ನು ಪ್ರಕಟ ಮಾಡಿದೆ. ವಿರಾಟ್ ಕೊಹ್ಲಿ ಮರಳಿ ನಾಯಕತ್ವ ನಿಭಾಯಿಸಲಿದ್ದು ಅಜಿಂಕ್ಯ ರಹಾನೆ ಉಪನಾಯಕನ ಜವಾಬ್ದಾರಿ ಹೊರಲಿದ್ದಾರೆ.
“ನಾವೆಲ್ಲರೂ ಈ ಗೆಲುವನ್ನು ಆನಂದಿಸಬೇಕು. ಕೇವಲ ತಂಡವಷ್ಟೇ ಅಲ್ಲ ಪ್ರತಿಯೊಬ್ಬ ಭಾರತೀಯ ಈ ಗೆಲುವನ್ನು ಆನಂದಿಸಬೇಕು. ಇಲ್ಲಿ ನಾವು ಮಾಡಿರುವುದು ಐತಿಹಾಸಿಕ ಸಾಧನೆ. ಈ ರಾತ್ರಿ ಗೆಲುವಿನ ಸಂಭ್ರಮಾಚರಣೆ ಜೋರಾಗಿ ನಡೆಯಲಿದೆ. ಭಾರತಕ್ಕೆ ಮರಳಿದ ಬಳಿಕವಷ್ಟೇ ಇಂಗ್ಲೆಂಡ್ ವಿರುದ್ಧದ ಸರಣಿ ಬಗ್ಗೆ ಆಲೋಚಿಸಲಿದ್ದೇವೆ,” ಎಂದು ರಹಾನೆ ನುಡಿದಿದ್ದಾರೆ.
ರಹಾನೆ ಇದೇ ವೇಳೆ ಆಸ್ಟ್ರೇಲಿಯಾ ತಂಡದ ಪರ 100ನೇ ಟೆಸ್ಟ್ ಆಡಿದ ಆಫ್ ಸ್ಪಿನ್ನರ್ ನೇಥನ್ ಲಯಾನ್‌ಗೆ ತಂಡದ ಎಲ್ಲಾ ಸದಸ್ಯರ ಹಸ್ತಾಕ್ಷರ ಇರುವ ಟೀ-ಶರ್ಟ್ ನೀಡುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದರು. ಅಂದಹಾಗೆ ಒಂದು ನೋ-ಬಾಲ್ ಕೂಡ ಎಸೆಯದೆ 100 ಟೆಸ್ಟ್ ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಲಯಾನ್ ಪಾತ್ರರಾಗಿದ್ದಾರೆ.