ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಕೊರತೆ ಇದೆ. ಬೆಂಗಳೂರು ನಗರದಲ್ಲಿ ಪ್ರಸ್ತುತ ಲಭ್ಯವಿರುವ ಸ್ಪುಟ್ನಿಕ್ ವಿ ಲಸಿಕೆಗಳನ್ನು ಸಹ ಪಡೆಯಲು ಜನರು ಮುಂದಾಗಿದ್ದು, ಎಲ್ಲಾ ಸ್ಲಾಟ್ ಬುಕ್ ಆಗಿವೆ.
10 ದಿನಗಳ ಹಿಂದೆ ಬೆಂಗಳೂರು ನಗರದಲ್ಲಿ ಸ್ಪುಟ್ನಿಕ್ ವಿ ಲಸಿಕೆ ನೀಡುವ ಅಭಿಯಾನ ಆರಂಭಗೊಂಡಿದೆ. ನಗರದ 4 ಕೇಂದ್ರಗಳಲ್ಲಿ ಮಾತ್ರ ಸದ್ಯಕ್ಕೆ ಲಸಿಕೆ ನೀಡಲಾಗುತ್ತಿದ್ದು, ಎಲ್ಲಿಯೂ ಸ್ಲಾಟ್ ಖಾಲಿ ಇಲ್ಲ.
21 ದಿನಗಳ ಅಂತರದಲ್ಲಿ ಸ್ಪುಟ್ನಿಕ್ ವಿ ಎರಡು ಡೋಸ್ ಲಸಿಕೆ ಪಡೆಯಬಹುದಾಗಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ಗೆ ಹೋಲಿಕೆ ಮಾಡಿದರೆ ಲಸಿಕೆ ಪಡೆಯುವ ದಿನಗಳ ಅಂತರ ಬಹಳ ಕಡಿಮೆ ಇದೆ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ರಷ್ಯಾ ಮೂಲದ ಸ್ಪುಟ್ನಿಕ್ ಲಸಿಕೆ ಸಹ ಬಹಳ ಪರಿಣಾಮಕಾರಿ ಎಂಬ ವರದಿಗಳು ಇವೆ. ಆದ್ದರಿಂದ ಬೆಂಗಳೂರಿನ ಜನರು ಸ್ಪುಟ್ನಿಕ್ ಲಸಿಕೆ ಪಡೆಯಲು ಮುಂದಾಗಿದ್ದಾರೆ.
ವೈದೇಹಿ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ, ಟೆಂಟ್ ಡಯೋಗ್ನಾಸ್ಟಿಕ್‌ಗಳಲ್ಲಿ ಸ್ಪುಟ್ನಿಕ್ ಲಸಿಕೆ ಪಡೆಯಲು ಸ್ಲಾಟ್ ಖಾಲಿ ಇಲ್ಲ. ಮಣಿಪಾಲ್ ಆಸ್ಪತ್ರೆಯಲ್ಲಿ ಸ್ಲಾಟ್ ಲಭ್ಯವಿದೆ. ಆದರೆ ಕೊವಿನ್ ಅಪ್ಲಿಕೇಶನ್‌ನಲ್ಲಿ ತೋರಿಸುತ್ತಿಲ್ಲ. ಜೂನ್ 29ರ ಬಳಿಕ 3,500 ಡೋಸ್ ಲಸಿಕೆ ನೀಡಲಾಗಿದೆ.
ಮಣಿಪಾಲ್ ಆಸ್ಪತ್ರೆಯ ವೈದ್ಯರಾದ ಡಾ. ಸತ್ಯನಾರಾಯಾಣ ಸ್ಪುಟ್ನಿಕ್ ಲಸಿಕೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. “ಜೂನ್ 29ರ ಬಳಿಕ 3,500 ಡೋಸ್ ಲಸಿಕೆ ನೀಡಿದ್ದೇವೆ. ಲಸಿಕೆ ಪರಿಣಾಮ ಉತ್ತಮವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ. ಕಡಿಮೆ ಅವಧಿಯನ್ನು ಇದು ಹೊಂದಿದೆ” ಎಂದು ಹೇಳಿದ್ದಾರೆ.
ಯುನೈಟೆಡ್ ಆಸ್ಪತ್ರೆ 2,400 ಡೋಸ್ ಸ್ಪುಟ್ನಿಕ್ ಲಸಿಕೆಯನ್ನು ಪಡೆದಿತ್ತು. ಇದರಲ್ಲಿ 1,200 ಡೋಸ್ ಈಗಾಗಲೇ ನೀಡಲಾಗಿದೆ. ಹೆಚ್ಚುವರಿಯಾಗಿ 12,000 ಡೋಸ್‌ಗೆ ಬೇಡಿಕೆ ಸಲ್ಲಿಕೆ ಮಾಡಿದ್ದು, ಶನಿವಾರದ ಬಳಿಕ ಅದು ಬರುವ ನಿರೀಕ್ಷಯಲ್ಲಿ ಆಸ್ಪತ್ರೆ ಇದೆ.