ರಾಜ್ಯದ ಈ ಭಾಗಗಳಲ್ಲಿ ಮುಂದಿನ 2 ದಿನ ಭಾರಿ ಮಳೆ

0
37

ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ 2 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಅವರು ಬಂಗಾಳಕೊಲ್ಲಿಯ ಉಪಸಾಗರದಲ್ಲಿ ಬದಲಾವಣೆಯಾಗಿದ್ದು, ಮುಂದಿನ ಎರಡು ದಿನಗಳ ಕಾಲ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ನಿರೀಕ್ಷಿಸಬಹುದಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಜಲಾಶಯಗಳ ಜಲಾನಯನ ಭಾಗಗಳಲ್ಲಿ ಅಧಿಕ ಪ್ರಮಾಣದ ಮಳೆಯಾಗುತ್ತಿಲ್ಲ. ಇದರಿಂದ ಜಲಾಶಯಗಳ ಒಳ ಹರಿವಿನ ಪ್ರಮಾಣ ಕಡಿಮೆ ಇದೆ. ಜುಲೈನಲ್ಲಿ ಭಾರೀ ಮಳೆಯಿಂದಾಗಿ ಗಣನೀಯ ಪ್ರಮಾಣದಲ್ಲಿ ಜಲಾಶಯಗಳಿಗೆ ನೀರು ಹರಿದು ಬಂದಿತ್ತು. ಇದರಿಂದ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದವು.

ಕಲಬುರಗಿ, ಕೊಳ್ಳೇಗಾಲ, ಆಗುಂಬೆ, ಕೃಷ್ಣರಾಜಪೇಟೆ, ಚಿಂಚೋಳಿ, ಮೈಸೂರು, ಬಸವರಾಯನದುರ್ಗ, ಶ್ರೀರಂಗಪಟ್ಟಣ, ಸುಳ್ಯ, ಹೊಸಕೋಟೆ, ಚಾಮರಾಜನಗರ, ಮಂಚಿಕೆರೆ, ಮುನೀರಾಬಾದ್, ಮಂಡ್ಯ, ಕುಷ್ಟಗಿ, ಥೊಂಡೆಭಾವಿಯಲ್ಲಿ ಮಳೆಯಗಾಗಿದೆ.

ನೈಋತ್ಯ ಮುಂಗಾರು ಚೇತರಿಕೆ ಕಂಡಿದ್ದು, ರಾಜ್ಯದ ಬಹುತೇಕ ಕಡೆ ಹಗುರದಿಂದ ಸಾಧಾರಣ ಮಳೆಯಾದ ವರದಿಯಾಗಿದೆ. ಬಾಗಲಕೋಟೆ, ಗದಗ, ವಿಜಯಪುರ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದೆ. ಕೆಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಸಾಧಾರಣ ಮಳೆಯಾದ ವರದಿಯಾಗಿದೆ.

ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಆಗಸ್ಟ್ 26ರ ವರೆಗೆ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ.ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಕೂಡ ಚುರುಕುಗೊಂಡಿವೆ. ವಿವಿಧ ಬೆಳೆಗಳ ಬಿತ್ತನೆ, ಭತ್ತ, ರಾಗಿ, ನಾಟಿ ಕಾರ್ಯವು ಚುರುಕುಗೊಂಡಿದೆ.

 

LEAVE A REPLY

Please enter your comment!
Please enter your name here