ರಾಜ್ಯಾದ್ಯಂತ ಮುಂಗಾರು ಚುರುಕಾಗಿದ್ದು, 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಎರು ದಿನಗಳಿಂದ ರಾಜ್ಯದ ಕರಾವಳಿ ಭಾಗಗಳಲ್ಲಿ ಮಳೆ ಕೊಂಚ ಬಿಡುವು ಪಡೆದಿದೆ, ಆದರೆ ಇಂದು(ಜೂನ್ 21) ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಆಗುಂಬೆಯಲ್ಲಿ 15 ಸೆಂ.ಮೀ, ಕಾರ್ಕಳದಲ್ಲಿ 12 ಸೆಂ.ಮೀನಷ್ಟು ಮಳೆಯಾಗಿದೆ, ಕೊಲ್ಲೂರು, ಮಂಕಿ, ಸಿದ್ದಾಪುರ, ಭಟ್ಕಳ, ಗೋಕರ್ಣ, ಮೂಡುಬಿದಿರೆ, ಕದ್ರ, ಸಿದ್ದಾಪುರ, ಪಣಂಬೂರು, ಕೋಟ, ಕುಂದಾಪುರ, ಕೊಟ್ಟಿಗೆಹಾರ, ಕಾರವಾರದಲ್ಲಿ ಮಳೆಯಾಗಿದೆ.
ಇಂದು ಮತ್ತು ನಾಳೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಈ ಬಾರಿಯೂ ಉತ್ತರ ಕರ್ನಾಟಕದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಕಳೆದೊಂದು ವಾರದಿಂದ ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಸುರಿದ ಮಳೆಯಿಂದ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಬೆಳಗಾವಿ ಮತ್ತು ಬಾಗಲಕೋಟೆಯ 20ಕ್ಕೂ ಹೆಚ್ಚು ಸೇತುವೆಗಳು ಮುಳುಗಿವೆ.
ಕರ್ನಾಟಕದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ನೈಋತ್ಯ ಮಾನ್ಸೂನ್ ಅಬ್ಬರ ಹೆಚ್ಚಾಗಲಿದೆ. ಇದರಿಂದ ಬೆಂಗಳೂರಿನಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಹೊಸನಗರ, ತೀರ್ಥಹಳ್ಳಿ, ಸಾಗರ, ಸಿದ್ಧಾಪುರ, ಶಿರಸಿ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು ತಾಲೂಕುಗಳಲ್ಲಿ ಮಳೆಯ ಅಬ್ಬರ ಇಂದು ಕೂಡ ಮುಂದುವರೆಯಲಿದ್ದು, ಶರಾವತಿ, ತುಂಗಾ, ಭದ್ರಾ, ವರಾಹಿ, ವರದಾ, ಅಘನಾಶಿನಿ ನದಿಗಳು ತುಂಬಿ ಹರಿಯುತ್ತಿವೆ. ತುಂಗಾ ಜಲಾಶಯದಿಂದ ಈಗಾಗಲೇ ನೀರನ್ನು ಹೊರಬಿಡಲಾಗಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಾಗಿರುವುದರಿಂದ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ.