ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ: ಡಿ.ಕೆ. ಶಿವಕುಮಾರ್
ಬೆಳಗಾವಿ: ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ಆಡಳಿತ ಮತ್ತು ವಿರೋಧ ಪಕ್ಷಗಳು ಸೇರಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ.
ರೈತರ ವಿಚಾರದಲ್ಲಿ ಕೇಂದ್ರ ಸರ್ಕಾರ ಭಾಗಿಯಾಗದೇ ಇರುವುದೇಕೆ? ಬೆಂಬಲ ಬೆಲೆ ಬಿಡುಗಡೆ ಮಾಡದೇ ಇರುವುದೇಕೆ? ಬೆಳೆಗಳನ್ನು ಯಾಕೆ ಖರೀದಿ ಮಾಡುತ್ತಿಲ್ಲ? ಸಕ್ಕರೆ ಬೆಲೆ ಸೇರಿದಂತೆ ಹಲವು ವಿಷಯಗಳಲ್ಲಿ ಚರ್ಚೆ ಅಗತ್ಯವಿದೆ. ಈ ಎಲ್ಲ ವಿಷಯಗಳಲ್ಲಿ ಕೇಂದ್ರದ ಮೇಲೆ ಒತ್ತಡ ತರಬೇಕಾಗಿದೆ” ಎಂದರು.
ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳು ಹಾಗೂ ಕೇಂದ್ರದಿಂದ ಬರಬೇಕಾದ ಬಾಕಿ ಹಣ ಬಿಡುಗಡೆ ಕುರಿತ ವಿಷಯಗಳೂ ಅಧಿವೇಶನದಲ್ಲಿ ಪ್ರಸ್ತಾಪವಾಗಲಿವೆ ಎಂದು ಅವರು ಹೇಳಿದರು.
ಬಿಜೆಪಿ ಹಾಗೂ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ, “ನಾವು ಕಬ್ಬು, ಮೆಕ್ಕೆಜೋಳಕ್ಕೆ ರೈತ ಪರ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ. ಬಿಜೆಪಿ ಸರ್ಕಾರ ಇದವನ್ನು ತನ್ನ ಅವಧಿಯಲ್ಲಿ ಎಂದಾದರೂ ಮಾಡಿತೇ? ಮೆಕ್ಕೆಜೋಳ ಖರೀದಿಗೆ ತೀರ್ಮಾನ ಮಾಡಿದ್ದೇವೆ. ಕಬ್ಬಿನ ವಿಚಾರದಲ್ಲಿ ರೈತರ ಪರ ನಿಂತಿದ್ದೇವೆ. ಆದರೆ ಸಕ್ಕರೆ ಕಾರ್ಖಾನೆಗಳು ನಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಿವೆ. ಸಕ್ಕರೆ ದರ ನಿಗದಿ ಮಾಡುವುದು ಕೇಂದ್ರದ ಕೆಲಸ. ಕಳೆದ 10 ವರ್ಷಗಳಿಂದ ದರ ಹೆಚ್ಚಳ ಮಾಡಿಲ್ಲ. ರೈತರು ಬದುಕಲು ಕೇಂದ್ರ ಸರ್ಕಾರ ಸಹಾಯ ಮಾಡಬೇಕಾಗಿದೆ. ಹೋರಾಟ ಮಾಡಬೇಕಿರುವುದು ಬಿಜೆಪಿ ವಿರೋಧವಾಗಿ ಅಲ್ಲ, ಕೇಂದ್ರ ಸರ್ಕಾರದ ವಿರುದ್ಧ” ಎಂದು ತಿರುಗೇಟು ನೀಡಿದರು.






