ರಾಜ್ಯದ ಹಲವು ಜಿಲ್ಲೆಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ; ಬೆಂಗಳೂರಿನ AQI ಆತಂಕಕಾರಿ ಮಟ್ಟಕ್ಕೆ ಕುಸಿತ
ಬೆಂಗಳೂರು: ಬೆಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ದಿನೇ ದಿನೇ ಹದಗೆಡುತ್ತಿದೆ. ಏರ್ ಕ್ವಾಲಿಟಿಯಲ್ಲಿ ಬಳ್ಳಾರಿ ಬೆಂಗಳೂರನ್ನೇ ಮೀರಿಸಿದರೂ, ಬೆಂಗಳೂರಿನ ವಾತಾವರಣವು ದೆಹಲಿಗಿಂತ ಭಿನ್ನವಾಗಿಲ್ಲ ಎಂಬ ಆತಂಕಕಾರಿ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಕಳೆದ ಐದು ವರ್ಷಗಳಿಂದ ನಗರದಲ್ಲಿನ ಗಾಳಿಯ ಗುಣಮಟ್ಟ ನಿರಂತರವಾಗಿ ಕುಸಿಯುತ್ತಿದ್ದು, ಗಾಳಿಯಲ್ಲಿನ PM ಪ್ರಮಾಣವೂ ಮಿತಿಯನ್ನು ಮೀರಿದೆ.
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) ಇದೀಗ ಹಿಂದಿನಗಿಂತಲೂ ಗಂಭೀರ ಮಟ್ಟಕ್ಕೆ ಇಳಿದಿದೆ. ನಗರದಲ್ಲಿ AQI 170 ದಾಖಲಾಗಿದ್ದು, ಕಳೆದ ಐದು ವರ್ಷಗಳಲ್ಲಿ ಮಾಲಿನ್ಯ ಮಟ್ಟದಲ್ಲಿ ಸರಾಸರಿ 20ರಿಂದ 25 ಶೇಕಡಾ ಏರಿಕೆ ಕಂಡುಬಂದಿದೆ. ವಾಯು ಮಾಲಿನ್ಯದ ರಾಜಧಾನಿ ಎಂದೇ ಕರೆಸಿಕೊಳ್ಳುವ ದೆಹಲಿಯಲ್ಲಿ AQI 584 ದಾಟಿ ‘ಅತ್ಯಂತ ಅಪಾಯಕಾರಿ’ ಹಂತ ತಲುಪಿದೆ.
ದೆಹಲಿಗೆ ಹೋಲಿಸಿದರೆ ಬೆಂಗಳೂರು ಇನ್ನೂ ಉತ್ತಮ ಸ್ಥಿತಿಯಲ್ಲಿದ್ದರೂ, ಇಲ್ಲಿನ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿದೆ. ಮುಂಬೈ (169) ಮತ್ತು ಕೋಲ್ಕತ್ತಾ (182) ನಗರಗಳಿಗೆ ಹೋಲಿಸಿದರೆ ಬೆಂಗಳೂರು ಈಗ ಅವುಗಳಿಗೆ ಹತ್ತಿರದ ಮಟ್ಟಕ್ಕೆ ತಲುಪುತ್ತಿದೆ. ಹತ್ತು ವರ್ಷಗಳ ಹಿಂದೆ ದೆಹಲಿ ಮತ್ತು ಬೆಂಗಳೂರಿನ ಮಾಲಿನ್ಯ ಮಟ್ಟಗಳ ನಡುವೆ ಸುಮಾರು 300 ಶೇಕಡಾ ವ್ಯತ್ಯಾಸವಿದ್ದರೆ, ಇದೀಗ ಆ ಅಂತರವು ಗಣನೀಯವಾಗಿ ಕಡಿಮೆಯಾಗಿದೆ.
ಇಂದಿನ ಬೆಂಗಳೂರಿನ ಗಾಳಿಯಲ್ಲಿ PM2.5 ಪ್ರಮಾಣ 64 ಮೈಕ್ರೋಗ್ರಾಂ ಪ್ರತಿ ಕ್ಯೂಬಿಕ್ ಮೀಟರ್ (µg/m³) ಆಗಿದ್ದು, ಇದು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿರುವ ಸುರಕ್ಷಿತ ಮಿತಿಯಾದ 15 µg/m³ ಗಿಂತ ಸುಮಾರು 4.2 ಪಟ್ಟು ಹೆಚ್ಚಾಗಿದೆ. PM ಎಂದರೆ ಗಾಳಿಯಲ್ಲಿ ತೇಲುವ ಸೂಕ್ಷ್ಮ ಕಣಗಳು. PM2.5 ಎಂದರೆ ಅತ್ಯಂತ ಸಣ್ಣ ಗಾತ್ರದ ಕಣಗಳು, PM10 ಎಂದರೆ ತುಸು ದೊಡ್ಡ ಗಾತ್ರದ ಕಣಗಳಾಗಿವೆ.
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 1.2 ಕೋಟಿ ದಾಟಿದ್ದು, ನಗರದಲ್ಲಿನ ವಾಯು ಮಾಲಿನ್ಯಕ್ಕೆ ಸುಮಾರು 42 ಶೇಕಡಾ ಕೊಡುಗೆ ಈ ವಾಹನಗಳಿಂದಲೇ ಬರುತ್ತಿದೆ. ಸಿಲ್ಕ್ ಬೋರ್ಡ್ ಹಾಗೂ ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ AQI ಮಟ್ಟವು ನಗರದ ಸರಾಸರಿಗಿಂತ 30 ಶೇಕಡಾ ಹೆಚ್ಚು ದಾಖಲಾಗುತ್ತಿದೆ.
ಈ ಪರಿಸ್ಥಿತಿ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, AQI 150 ದಾಟಿದರೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಜೊತೆಗೆ ಹೃದಯ ಸಂಬಂಧಿ ರೋಗಗಳಿಗೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ, ಬೆಂಗಳೂರು ಹಾಗೂ ಬಳ್ಳಾರಿಯ ಜನತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.






