ರಾಜ್ಯಾದ್ಯಂತ ಕೊವಿಡ್ ಲಸಿಕೆ ಡ್ರೈರನ್
ಬಹುನಿರೀಕ್ಷಿತ ಕೋವಿಡ್ ಲಸಿಕೆ ವಿತರಣೆ ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅದರ ಪುರ್ವಾಭ್ಯಾಸಕ್ಕೆ ಶುಕ್ರವಾರ ರಾಜ್ಯದಲ್ಲೂ ಚಾಲನೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಿದ್ದತೆಗಳನ್ನು ಆರೋಗ್ಯ ಇಲಾಖೆ ನಡೆಸುತ್ತಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡ್ರೈ ರನ್ ನಡೆಯಲಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಕೇಂದ್ರಗಳು ತಾಲೀಮು ನಡೆಸಲು ಸಜ್ಜಾಗುತ್ತಿವೆ. ಆರಂಭಿಕ ಹಂತದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರ್ಗಿ ಹಾಗೂ ಶಿವಮೊಗ್ಗದಲ್ಲಿ ಲಸಿಕೆ ವಿತರಣೆ ಡ್ರೈರನ್ ನಡೆಸಲಾಗಿತ್ತು.
ಕೇಂದ್ರದ ಸೂಚನೆಯಂತೆ ನಡೆದ ಈ ತಾಲೀಮು ಯಶಸ್ವಿಯಾಗಿತ್ತು. ಪ್ರತಿ ಕೇಂದ್ರದಲ್ಲಿ ಡ್ರೈರನ್‌ಗಾಗಿ 25 ಮಂದಿ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿತ್ತು. ಲಸಿಕೆ ಪಡೆಯಲು ಬಂದವರ ದಾಖಲೆ ಪರಿಶೀಲನೆ ನಡೆಸಿ ಬಳಿಕ ಲಸಿಕೆ ನೀಡಿ ಅವರ ಮೇಲೆ ನಿಗಾ ಇಡುವ ಪ್ರಕ್ರಿಯೆ ಯಶಸ್ವಿಯಾಗಿದೆ.
ಇದೀಗ ರಾಜ್ಯಾದ್ಯಂತ ಈ ಪ್ರಕ್ರಿಯೆಯನ್ನು ನಡೆಸಲು ಆರೋಗ್ಯ ಇಲಾಖೆ ಸಜ್ಜಾಗಿದ್ದು ಇದಕ್ಕಾಗಿ ಸರ್ಕಾರಿ ಕ್ಷೇತ್ರದ 2,73,211 ಆರೋಗ್ಯ ಕಾರ್ಯಕರ್ತರು ಹಾಗೂ ಖಾಸಗಿ ಕ್ಷೇತ್ರದ 3,57,313 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಸುಮಾರು 10 ಸಾವಿರ ಸಿಬ್ಬಂದಿಗಳು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ದೇಶದಾದ್ಯಂತ ಕೋವಿಡ್ ಲಸಿಕೆ ಅಣಕು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಆರೋಗ್ಯ ಸಚಿವರ ಜೊತೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಗುರುವಾರ ವಿಡಿಯೋ ಸಂವಾದ ನಡೆಸಲಿದ್ದಾರೆ. ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಈ ಸಂವಾದದಲ್ಲಿ ಪಾಲ್ಗೊಂಡು ರಾಜ್ಯದಲ್ಲಿನ ಸಿದ್ಧತೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ.
–…..
ಗುಡುಗಿದ ಚಂದನ್‌ಶೆಟ್ಟಿ
ಇತ್ತೀಚೆಗಷ್ಟೇ ಹೊಸ ಹಾಡು ರಿಲೀಸ್ ಮಾಡಿರುವ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಕೆಲವು ಪಬ್‌ಗಳ ಬಗ್ಗೆ ತಕರಾರು ತೆಗೆದಿದ್ದಾರೆ. ಬೆಂಗಳೂರಿನ ಪಬ್‌ಗಳಲ್ಲಿ ಕನ್ನಡ ಹಾಡನ್ನು ಹಾಕುವುದಿಲ್ಲ ಎಂದು ಅವರು ಗುಡುಗಿದ್ದಾರೆ. ತಾವು ಭೇಟಿ ನೀಡಿದ ಪಬ್‌ನಲ್ಲಿ ಯಾವ ರೀತಿಯ ಪರಿಸ್ಥಿತಿ ಇತ್ತು ಎಂಬುದನ್ನು ಅವರು ವಿವರಿಸಿದ್ದಾರೆ.
‘ನನಗೆ ಅರ್ಥ ಆಗತ್ತೆ ಸ್ವಾಮಿ. ಬೆಂಗಳೂರು ಒಂದು ಮೆಟ್ರೋಪಾಲಿಟನ್ ಸಿಟಿ. ಇಲ್ಲಿಗೆ ಬೇರೆ ಬೇರೆ ಭಾಷೆ, ರಾಜ್ಯ ಮತ್ತು ದೇಶದ ಜನರು ಬಂದಿದ್ದಾರೆ. ಎಲ್ಲ ಭಾಷೆಯ ಹಾಡುಗಳನ್ನು ಹಾಕಬೇಕು. ಕನ್ನಡವನ್ನೂ ಹಾಕಿ ಎಂದು ನಾವು ಮನವಿ ಮಾಡುತ್ತಿದ್ದೇವೆ. ಕನ್ನಡವನ್ನೇ ಹಾಕಬೇಕು ಅಂತ ನಾನೇನೂ ಹೇಳುತ್ತಿಲ್ಲವಲ್ಲ. ಕನ್ನಡ ಹಾಡು ಹಾಕಿದರೆ ನಿಮ್ಮ ವ್ಯಾಲ್ಯೂ ಕಡಿಮೆ ಆಗುತ್ತೆ ಎಂಬ ಮನಸ್ಥಿತಿಯಿಂದ ದಯವಿಟ್ಟು ಪಬ್‌ನ ಮ್ಯಾನೇಜ್‌ಮೆಂಟ್‌ನವರು ಹೊರಬನ್ನಿ. ನಮ್ಮಲ್ಲೂ ಮಿಲಿಯನ್‌ಗಟ್ಟಲೆ ಓಡಿದ ಹಾಡುಗಳಿವೆ. ಆಲ್ ಓಕೆ ಮುಂತಾದ ಒಳ್ಳೆಯ ಆರ್ಟಿಸ್ಟ್‌ಗಳ ಹಾಡುಗಳನ್ನು ಪ್ಲೇ ಮಾಡಿ. ಎಲ್ಲ ಕಲಾವಿದರ ಪರವಾಗಿ ನಾನು ಇದನ್ನು ಹೇಳುತ್ತಿದ್ದೇನೆ’ ಎಂಬುದು ಚಂದನ್ ಶೆಟ್ಟಿ ಮಾತುಗಳು.