ಮಾರ್ಚ್ 11ಕ್ಕೆ ರಾಬರ್ಟ್ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ ಎಂದು ನಟ ದರ್ಶನ್ ಹೇಳಿದ್ದಾರೆ.
ಇಂದು ಫೇಸ್‍ಬುಕ್ ಲೈವ್ ಬಂದಿದ್ದ ಸಾರಥಿ ದರ್ಶನ್, ಆರಂಭದಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದರು. ನಂತರ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮಾರ್ಚ್ 11ರಂದು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ. ಓಟಿಟಿ ಪ್ಲಾಟ್‍ಫಾರಂನಲ್ಲಿ ಸಿನಿಮಾ ಬಿಡುಗಡೆಗೆ ದರ್ಶನ್ ವಿರೋಧ ವ್ಯಕ್ತಪಡಿಸಿದರು. ಥಿಯೇಟರ್ ನಲ್ಲಿ ಕೇಳುವ ಚಪ್ಪಾಳೆಗಳೇ ನಮಗೆ ಮುಖ್ಯ. ಸದ್ಯ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಆದ್ರೂ ನಾವು ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ರಾಬರ್ಟ್ ಸಿನಿಮಾ ಬಿಡುಗಡೆ ನಂತರ ಎಲ್ಲ ಅಭಿಮಾನಿಗಳನ್ನ ಭೇಟಿ ಆಗುತ್ತೇನೆ. ಹಾಗಾಗಿ ಫೆಬ್ರವರಿ 16ರ ನನ್ನ ಬರ್ತ್ ಡೇಗೆ ದೂರದ ಊರುಗಳಿಂದ ಬರಬೇಡಿ. 2020ರಲ್ಲಿ ಕೊರೊನಾದಿಂದಾಗಿ ಎಷ್ಟೋ ಜನ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದೀರಿ. ಇಂತಹ ಸಮಯದಲ್ಲಿ ಹಣ ವ್ಯಯ ಮಾಡೋದು ಬೇಡ. ಎಷ್ಟೋ ಜನ ಕೆಲಸ ಕಳೆದುಕೊಂಡರು. ಹೊಟ್ಟೆಗೆ ಹಿಟ್ಟಿಲ್ಲ. 2020ರಲ್ಲಿ ವಿಧಿ ನಮಗೆ ಹಲವು ಪಾಠ ಕಲಿಸಿದೆ. ಆದ್ದರಿಂದ ಮೊದಲು ನೀವು ಚೆನ್ನಾಗಿರಿ. 2022ಕ್ಕೆ ಈ ಎಲ್ಲ ಕಷ್ಟಗಳು ದೂರವಾದ ಮೇಲೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳೋಣ. ಕೊರೊನಾದಿಂದಾ ನಿಮ್ಮ ನಷ್ಟವನ್ನ ತುಂಬಿಕೊಳ್ಳಿ. ಶುಭಾಶಯ ತಿಳಿಸಲು ಬೆಂಗಳೂರಿಗೆ ಬರಬೇಡಿ ಅಂತ ಹೇಳಿದರು.
———————————————-
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಕೋವಿಡ್ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ಪಾಲಿಕೆ ಸಿಬ್ಬಂದಿ, ಶಿಕ್ಷಕರು, ಪೊಲೀಸರು, ಕಂದಾಯ ಅಧಿಕಾರಿಗಳೂ ಸೇರಿದಂತೆ ಇತರೆ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಮೂರನೇ ಹಂತದಲ್ಲಿ 50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರು, ಅನ್ಯ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ವಿತರಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.
ನಗರದ ಮಲ್ಲೇಶ್ವರಂನಲ್ಲಿರುವ ಐಪಿಪಿ ಕೇಂದ್ರದಲ್ಲಿ ಕೋವಿಡ್ ಲಸಿಕೆ ವಿತರಣೆ ಸಂಬಂಧ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ”ಮತದಾರರ ಪಟ್ಟಿ ಆಧರಿಸಿ 50 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಲಸಿಕೆ ನೀಡಲಾಗುವುದು” ಎಂದರು.
”ಕೋವಿಡ್ ಲಸಿಕೆಯನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಯೋಜನೆ ರೂಪಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿಲಸಿಕೆ ನೀಡಲು ಗುರುತಿಸಿರುವ 1507 ಕೇಂದ್ರಗಳಿಗೆ ತಲಾ ಐದು ಮಂದಿಯಂತೆ 300 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಬೇಕು. ಈ ಅಧಿಕಾರಿಗಳು ನಿರ್ವಹಿಸಬೇಕಿರುವ ಜವಾಬ್ದಾರಿಗಳ ಬಗ್ಗೆ ತರಬೇತಿ ನೀಡಬೇಕು. ಲಸಿಕೆ ಕೇಂದ್ರಗಳ ಮಾರ್ಗ ನಕ್ಷೆ ಮತ್ತು ವಾಹನಗಳ ವ್ಯವಸ್ಥೆ ಮಾಡಿಕೊಡಬೇಕು” ಎಂದು ನಿರ್ದೇಶನ ನೀಡಿದರು.
”ಲಸಿಕೆ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಪ್ರತಿ ಕೇಂದ್ರದಲ್ಲಿ ದಿನಕ್ಕೆ 100 ಮಂದಿಗೆ ಲಸಿಕೆ ನೀಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಪ್ರತಿ ಕೇಂದ್ರಕ್ಕೆ ಆ್ಯಂಬುಲೆನ್ಸ್ ಮತ್ತು ಆಸ್ಪತ್ರೆಯನ್ನು ಲಿಂಕ್ ಮಾಡಬೇಕು. ಲಸಿಕೆ ನೀಡುವ ಸಂದರ್ಭದಲ್ಲಿ ಫಲಾನುಭವಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಾಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿಕೊಂಡಬೇಕು” ಎಂದು ಸೂಚನೆ ನೀಡಿದರು.
ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್, ಜೆ.ಮಂಜುನಾಥ್, ಮನೋಜ್ ಜೈನ್, ಬಸವರಾಜು, ತುಳಸಿ ಮದ್ದಿನೇನಿ ಮತ್ತಿತರರು ಉಪಸ್ಥಿತರಿದ್ದರು.
—————————————–
ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಟೀಸರ್ ಅಬ್ಬರಕ್ಕೆ ಇದೀಗ ಎಲ್ಲರೂ ಗಪ್‍ಚುಪ್ ಆಗಿದ್ದಾರೆ. ಗುರುವಾರ ರಾತ್ರಿ ರಿಲೀಸ್ ಆದ ಕೆಜಿಎಫ್-2 ಸಿನಿಮಾದ ಟೀಸರ್ ಸದ್ಯ ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್ ನಂ.1 ಆಗಿದೆ. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸುತ್ತಿರುವ ಕೆಜಿಎಫ್-2 ಟೀಸರ್ ಎಲ್ಲಾ ಸಿನಿ ಇಂಡಸ್ಟ್ರಿ ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡಿದೆ. ಅಲ್ಲದೆ ಟಾಲಿವುಡ್‍ನಲ್ಲಿ ಅಬ್ಬರಿಸಿದ ನಟ ಡಾರ್ಲಿಂಗ್ ಪ್ರಭಾಸ್ ಬಾಹುಬಲಿ ಚಿತ್ರದ ರೆಕಾರ್ಡ್ ನನ್ನು ಕೆಜಿಎಫ್-2 ಬ್ರೇಕ್ ಮಾಡಿ ಯೂಟ್ಯೂಬ್‍ನಲ್ಲಿ ಮುನ್ನುಗ್ಗುತ್ತಿದೆ.
ಕೆಜಿಎಫ್-2 ಸುನಾಮಿಗೆ ಎಲ್ಲಾ ಇಂಡಸ್ಟ್ರಿಯವರು ಫುಲ್ ಸೈಲೆಂಟ್ ಆಗಿದ್ದಾರೆ. ಚಿತ್ರದ ಟೀಸರ್ ಹವಾ ಈಗ ಎಲ್ಲೆಡೆ ಜೋರಾಗಿ ಸದ್ದುಮಾಡುತ್ತಿದೆ. ಟೀಸರ್ ರಿಲೀಸ್ ಆದ 48 ಗಂಟೆಗಳಲ್ಲಿ 116 ಮಿಲಿಯನ್ ವಿವ್ಸ್ ಪಡೆದ ಕೆಜಿಎಫ್-2, ಈ ಹಿಂದೆ ಟಾಲಿವುಡ್ ನಟ ಪ್ರಭಾಸ್ ಅಭಿನಯದ ಬಾಹುಬಲಿ-2 ಸಿನಿಮಾದ ಟ್ರೇಲರ್ ರೆಕಾರ್ಡ್‍ನನ್ನು ಬ್ರೇಕ್ ಮಾಡುವುದರ ಮೂಲಕ ಕೆಜಿಎಫ್ ಹಿಂದಿಕ್ಕಿದೆ.
ಬಾಹುಬಲಿ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಪಟ್ಟ ಅಲಂಕರಿಸಿದ ನಟ ಡಾರ್ಲಿಂಗ್ ಪ್ರಭಾಸ್ ಅಭಿನಯಿಸಿದ್ದ ಬಾಹುಬಲಿ-2 ಚಿತ್ರದ ಟ್ರೇಲರ್ ಬಿಡುಗಡೆಯಾದಾಗ 116 ಮಿಲಿಯನ್ ವಿವ್ಸ್ ಪಡೆದಿತ್ತು. ಆದ್ರೆ ಕೆಜಿಎಫ್-2 ಟೀಸರ್ ಬಾಹುಬಲಿ ಸಿನಿಮಾಕ್ಕಿಂತ ಕಡಿಮೆ ಅವಧಿಯಲ್ಲಿ 116 ಮಿಲಿಯನ್ ವಿವ್ಸ್ ದಾಟಿ ಮುನ್ನುಗ್ಗುತ್ತಿದೆ. ಟೀಸರ್ ಹವಾ ನೋಡಿ ಪರಭಾಷ ಸಿನಿಪಂಡಿತರು ಶಾಕ್ ಆಗಿದ್ದಾರೆ.
ಅಲ್ಲದೆ ಚಿತ್ರಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್‍ಗೆ ಬೇರೆ ಭಾಷೆಯ ಕಲಾವಿದರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಮೇಕಿಂಗ್ ರಾಕಿಂಗ್ ಸ್ಟಾರ್ ಲುಕ್‍ಗೆ ಜನ ಫಿದಾ ಆಗಿದ್ದಾರೆ. ಬಿಗ್ ಸ್ಕ್ರೀನ್‍ನಲ್ಲಿ ರಾಕಿ ಭಾಯ್ ನೋಡಲು ಪ್ರೇಕ್ಷಕರು ಹಾತೊರೆಯುತ್ತಿದ್ದಾರೆ.
————
ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬುಮ್ರಾ ವಿರುದ್ಧ ಪಂದ್ಯದ ಮೂರನೇ ದಿನದಾಟದಲ್ಲಿ ಕೆಲ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದರು. ಈ ಬಗ್ಗೆ ಪಂದ್ಯದ ಅಧಿಕಾರಿಗಳ ಎದುರು ಟೀಮ್ ಇಂಡಿಯಾ ಅಧಿಕೃತವಾಗಿ ದೂರನ್ನು ಕೂಡ ದಾಖಲಿಸಿದೆ.
ಇದೇ ವೇಳೆ ಶೇನ್ ವಾರ್ನ್ ಕೂಡ ಕಠಿಣ ಕ್ರಮ ಕೈಗೊಳ್ಳುವಂತ್ತೆ ಆಗ್ರಹಿಸಿದ್ದಾರೆ. “ಇದು ಅಗೌರವ ಸೂಚಿಸುವಂಥದ್ದು. ಈ ರೀತಿಯ ಘಟನೆಗಳು ನಡೆಯಬಾರದು. ಕಳೆದ 12 ತಿಂಗಳಲ್ಲಿ ಜಗತ್ತಿನಲ್ಲಿ ಏನೆಲ್ಲಾ ನಡೆದಿದೆ. ಈ ರೀತಿ ನಡೆದುಕೊಂಡಿರುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗಳ್ಳಬೇಕಿದೆ. ತಪ್ಪಿತಸ್ಥರನ್ನು ಕೂಡಲೇ ಪತ್ತೆ ಮಾಡಬೇಕಿದೆ,” ಎಂದಿದ್ದಾರೆ.
ಪ್ರೇಕ್ಷಕರ ಗ್ಯಾಲರಿಯಿಂದ ಕೆಲವರು ಜನಾಂಗೀಯ ನಿಂದನೆ ಮಾಡುತ್ತಿರುವುದನ್ನು ಬೌಲರ್‌ಗಳು ಕ್ಯಾಪ್ಟನ್ ಅಜಿಂಕ್ಯ ರಹಾನೆ ಗಮನಕ್ಕೆ ತಂದರು. ಬಳಿಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮತ್ತು ಆಟಗಾರರು ಒಂದೆಡೆ ಸೇರಿ ಕೋಚ್ ರವಿ ಶಾಸ್ತ್ರಿಗೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತ್ತೆ ಕೇಳಿದರು. ಬಳಿಕ ಭಾರತ ತಂಡ ಈ ರೀತಿಯ ವರ್ತನೆ ಮರುಕಳಿಸಬಾರದು ಎಂದು ಅಧಿಕೃತವಾಗಿ ದೂರು ದಾಖಲಿಸಿತು ಎಂದು ಬೆಳವಣಿಗೆಗೆ ಹತ್ತಿರದ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.
ಭಾರತದಲ್ಲಿ ಹುಟ್ಟಿ ಉದ್ಯೋಗ ಅರಸಿಕೊಂಡು ಕೋಟ್ಯಾಂತರ ಮಂದಿ ಸಾಗರ ದಾಟಿ ವಿವಿಧ ದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ತಾವು ಹುಟ್ಟೂರು ಬಿಟ್ಟು ತೆರಳಿದ್ದರೂ, ಭಾರತಕ್ಕೆ ಏನಾದರೂ ಸಂಕಷ್ಟ ಎದುರಾದಾಗ ಮೊದಲು ನೆರವಿಗೆ ಧಾವಿಸುವುದು ಅನಿವಾಸಿಗಳೇ. ತಮ್ಮ ಸಂಪಾದನೆಯ ಒಂದಿಷ್ಟು ಭಾಗವನ್ನು ಹುಟ್ಟೂರಿನ ಏಳಿಗೆಗಾಗಿಯೇ ಮೀಸಲಿಡುವ ಅನಿವಾಸಿ ಭಾರತೀಯರು ದೇಶದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಎನ್‌ಆರ್‌ಐಗಳಿಗಾಗಿಯೇ ಭಾರತ ಸರ್ಕಾರ ‘ಪ್ರವಾಸಿ ಭಾರತೀಯ ದಿವಸ್’ ಎಂದು ವರ್ಷದಲ್ಲಿ ಒಂದು ದಿನ ಮೀಸಲಿಟ್ಟಿದೆ.
ಹಾಗಾದರೆ ಏನಿದು ಪ್ರವಾಸಿ ಭಾರತೀಯ ದಿವಸ್? ಇದರ ಹಿನ್ನೆಲೆ ಏನು? ಈ ಆಚರಣೆ ಹಿಂದಿರುವ ಉದ್ದೇಶ ಏನು? ಅನಿವಾಸಿ ಭಾರತೀಯ ದಿನ ಆಚರಣೆ ಆರಂಭವಾಗಿದ್ದು ಯಾವಾಗಿನಿಂದ? ಈ ದಿನದಂದು ಎನ್‌ಆರ್‌ಐಗಳನ್ನು ಭಾರತ ಸರ್ಕಾರ ಹೇಗೆ ಗೌರವಿಸುತ್ತದೆ? ಇಂಥ ಹಲವು ಕುತೂಹಲ ವಿಷಯಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಭಾರತದ ಅಭಿವೃದ್ಧಿಯಲ್ಲಿ ಪ್ರವಾಸಿ ಭಾರತೀಯ ಸಮುದಾಯದ (ಎನ್.ಆರ್.ಐ) ಕೊಡುಗೆ ಅಪಾರ. ಪ್ರಪಂಚದ ವಿವಿಧ ಮೂಲೆಗಳಲ್ಲಿ ಇದ್ದುಕೊಂಡು ಭಾರತವನ್ನು ಪ್ರತಿನಿಧಿಸುವ ಅವರ ಕೊಡುಗೆಯನ್ನು ಗುರುತಿಸಲು ಹಾಗೂ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷದ ಜನವರಿ 9 ರಂದು ಪ್ರವಾಸಿ ಭಾರತೀಯ ದಿನವನ್ನು ಆಚರಿಸಲಾಗುತ್ತಿದೆ. ಈ ಆಚರಣೆ ವಿದೇಶಿ ಭಾರತೀಯ ಸಮುದಾಯಕ್ಕೆ ಭಾರತ ಸರ್ಕಾರ ಮತ್ತು ಭಾರತೀಯ ಸಮುದಾಯಗಳೊಂದಿಗೆ ಪರಸ್ಪರ ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ. ಅಲ್ಲದೇ ವಿದೇಶಗಳಲ್ಲಿರುವ ಇನ್ನಿತರ ಭಾರತೀಯರ ಪರಸ್ಪರ ಭೇಟಿಗೂ ವೇದಿಕೆ ಕಲ್ಪಿಸುತ್ತದೆ. ಇದನ್ನು ಎನ್‌ಆರ್‌ಐ ಭಾರತೀಯರ ದಿನ ಎಂದೂ ಕರೆಯಲಾಗುತ್ತದೆ.
2003ರಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಸ್ಮರಿಸಲೋಸುಗ ಈ ಆಚರಣೆಯನ್ನು ಪ್ರಾರಂಭಿಸಲಾಯ್ತು. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ವಾಣಿಜ್ಯ ಮಂಡಳಿ ಒಕ್ಕೂಟ, ಭಾರತೀಯ ಕೈಗಾರಿಕಾಚಒಕ್ಕೂಟ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದಿಂದ ಸಹಯೋಗದಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಪ್ರತೀ ವರ್ಷಕ್ಕೊಮ್ಮೆ ನಡೆಸಲಾಗುತ್ತಿದ್ದ ಈ ಆಚರಣೆ 2015ರ ಬಳಿಕ ಪ್ರತೀ ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತಿದೆ. ಈ ದಿನ ನಡೆಯುವ ಸಮಾವೇಶದಲ್ಲಿ ಅನಿವಾಸಿಗಳಿಗೆ ಭಾರತ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ
ದೇಶದ ಪ್ರತಿಯೊಂದು ಹಬ್ಬ, ಆಚರಣೆಗೆ ವಿವಿಧ ಹಿನ್ನೆಲೆ ಇರುವಂತೆ ಪ್ರವಾಸಿ ಭಾರತೀಯ ದಿನಕ್ಕೂ ತನ್ನದೇ ಆದ ಇತಿಹಾಸ ಇದೆ. ದಕ್ಷಿಣ ಆಫ್ರಿಕಾದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿ, ಕಪ್ಪು ಜನಾಂಗದವರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಹೋರಾಟ ಮಾಡಿ ಭಾರತಕ್ಕೆ ಮಹಾತ್ಮ ಗಾಂಧಿ ಮರಳಿದ ದಿನವನ್ನೇ ಪ್ರವಾಸಿ ಭಾರತೀಯ ದಿನವನ್ನಾಗಿ ಆಚರಿಸಲಾಗುತ್ತದೆ. 1915 ರ ಜನವರಿ 9 ರಂದು ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಹಿಂದಿರುಗಿದ್ದರು. ಅವರ ಆ ಐತಿಹಾಸಿಕ ಮರಳುವಿಕೆಯ ನೆನಪಿಗೋಸ್ಕರ ಪ್ರವಾಸಿ ಭಾರತೀಯ ದಿನವನ್ನು ಆಚರಿಸಲಾಗುತ್ತದೆ.
2003 ರಲ್ಲಿ ಆರಂಭವಾದ ಈ ದಿನಾಚರಣೆಯನ್ನು, ದೇಶದ ಯಾವುದಾದರೊಂದು ಪ್ರಮುಖ ನಗರದಲ್ಲಿ ಸಮಾವೇಶ ನಡೆಸುವ ಮೂಲಕ ಆಚರಿಸಲಾಗುತ್ತದೆ. 2003ರ ಸಮಾವೇಶ ದೆಹಲಿಯಲ್ಲಿ ನಡೆದಿದ್ದರೇ, 2019ರ ಸಮಾವೇಶ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ನಡೆದಿತ್ತು. 2017ರಲ್ಲಿ ಬೆಂಗೂರಿನಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಈ ಬಾರಿ ಕೋವಿಡ್‌ನಿಂದಾಗಿ ವರ್ಚ್ಯುವಲ್ ಸಮಾರಂಭ ನಡೆಯಲಿದೆ. ಈವರಗೆ ಒಟ್ಟು 15 ಸಮಾವೇಶಗಳು ನಡೆದಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ‘ಸ್ಥಳೀಯ ಅನಿವಾಸಿ ಭಾರತೀಯರ ದಿನ’ ಎನ್ನುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಮೆರಿಕ, ಸಿಂಗಾಪುರ, ಬ್ರಿಟನ್ ಸೇರಿದಂದತೆ ವಿವಿಧ ದೇಶಗಳಲ್ಲಿ
ಪ್ರವಾಸಿ ಭಾರತೀಯರನ್ನು ಗೌರವಿಸಲೆಂದೇ ಈ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕಾರ್ಯಕ್ರಮಕ್ಕೂ ಕೆಲ ದಿನಗಳ ಮುನ್ನ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲಿ ವಿಜೇತರಿಗೆ ಸಮಾವೇಶದಲ್ಲಿ ಪ್ರಶಸ್ತಿ ವಿತರಣೆ ನಡೆಯುತ್ತದೆ. ಈ ಬಾರಿ ‘ಭಾರತ್ ಕೋ ಜಾನಿಯೇ’ ಎಂಬ ಪರಿಕಲ್ಪನೆಯಡಿ ಕ್ವಿಜ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಲ್ಲದೇ ಈ ಸಮಾರಂಭದಲ್ಲಿ ವಿದೇಶದಲ್ಲಿ ಸಾಧನೆ ಮಾಡಿದ ಎನ್‌ಆರ್‌ಐಗಳಿಗೆ ಪ್ರತಿಷ್ಠಿತ “ಪ್ರವಾಸಿ ಭಾರತೀಯ ಸಮ್ಮಾನ್” ಎನ್ನುವ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ನೀಡಿ ಗೌರವಿಸುತ್ತಾರೆ. ಪ್ರತೀ ಸಮಾವೇಶದಲ್ಲೂ ಯಾವುದಾದರೊಂದು ದೇಶದ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಅಥವಾ ಉನ್ನತ ಅಧಿಕಾರಿಗಳು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ಈ ಬಾರಿಯ ಸಮಾವೇಶದಲ್ಲಿ, ದಕ್ಷಿಣ ಅಮೆರಿಕದ ಸುರಿನೇಮ್ ರಾಷ್ಟ್ರದ ಅಧ್ಯಕ್ಷ ಚಾನ್ ಸಂತೋಕಿಯವರು ಭಾಗವಹಿಸಲಿದ್ದಾರೆ.
ಪ್ರತೀ ವರ್ಷದ ಸಮಾವೇಶವನ್ನು ನಿರ್ದಿಷ್ಟ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗುತ್ತದೆ. ಈ ಬಾರಿಯ ಕಾರ್ಯಕ್ರಮವನ್ನು ಆತ್ಮನಿರ್ಭರ ಭಾರತದಲ್ಲಿ ವಲಸೆಗಾರರ ಪಾತ್ರ ಎಂಬ ಪರಿಕಲ್ಪನೆಯಡಿ ಆಯೋಜಿಸಲಾಗಿದೆ. ಈ ಸಮಾವೇಶವು ಎರಡು ಸಮಗ್ರ ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಕೋವಿಡ್ ಬಳಿಕದ ಸವಾಲುಗಳನ್ನು ಎದುರಿಸುವುದು – ಆರೋಗ್ಯ, ಆರ್ಥಿಕತೆ, ಸಾಮಾಜಿಕ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಸನ್ನಿವೇಶ ಮುಂತಾದ ವಿಷಯಗಳ ಬಗ್ಗೆ ಕೇಂದ್ರ ಸಚಿವರು ಮಾತನಾಡಲಿದ್ದಾರೆ.