ರಾಮೇಶ್ವರಂ ಕೆಫೆ ಊಟದಲ್ಲಿ ಹುಳ ಪತ್ತೆ ಪ್ರಕರಣ: ಮಾಲೀಕ, ಮ್ಯಾನೇಜರ್ ಮೇಲೆ FIR
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆಯ ಊಟದಲ್ಲಿ ಹುಳ ಕಂಡುಬಂದ ಘಟನೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಪ್ರಕರಣದಲ್ಲಿ ಕೆಫೆಯ ಮಾಲೀಕರು ಸುಳ್ಳು ದೂರು ನೀಡಿ ಗ್ರಾಹಕರಿಗೆ ಮಾನಹಾನಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್, ರಾಘವೇಂದ್ರ ರಾವ್ ಹಾಗೂ ಮ್ಯಾನೇಜರ್ ಸುಮಂತ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ
ವಿಮಾನ ನಿಲ್ದಾಣದ ಡಿಪಾರ್ಚರ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಯುವಕರೊಬ್ಬರು ಖರೀದಿಸಿದ ಊಟದಲ್ಲಿ ಹುಳ ಕಂಡುಬಂದಿದೆ. ಇದರಿಂದ ಆಘಾತಗೊಂಡ ಅವರು ಘಟನೆಯ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ವಿಡಿಯೋ ಕ್ಷಣಗಳಲ್ಲಿ ವೈರಲ್ ಆಯಿತು.
ಈ ನಡುವೆ ಕೆಫೆಗೆ ಯಾರೋ ಅನಾಮಧೇಯವಾಗಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕರೆಯನ್ನು ವಿಡಿಯೋ ಮಾಡಿದ ಯುವಕರೇ ಮಾಡಿದ್ದಾರೆ ಎಂದು ತಪ್ಪಾಗಿ ಭಾವಿಸಿದ ಕೆಫೆ ಮಾಲೀಕರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಯುವಕರ ವಿರುದ್ಧ ಬ್ಲ್ಯಾಕ್‌ಮೇಲ್ ಮತ್ತು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು. ಆರೋಪಗಳನ್ನು ಯುವಕರು ತಳ್ಳಿ ಹಾಕಿ, “ನಾವು ನಿಜವಾದ ಘಟನೆವನ್ನು ಮಾತ್ರ ಚಿತ್ರೀಕರಿಸಿದ್ದೇವೆ, ಹಣ ಕೇಳಿಲ್ಲ” ಎಂದು ಸ್ಪಷ್ಟಪಡಿಸಿದರು.
ಪ್ರಕರಣವನ್ನು ನಂತರ ವೈಯಾಲಿಕಾವಲ್ ಠಾಣೆಗೆ ವರ್ಗಾಯಿಸಲಾಯಿತು. ಪೊಲೀಸರು ನಡೆಸಿದ ತನಿಖೆಯಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೊಬೈಲ್ ನಂಬರ್ ವಿಡಿಯೋ ಮಾಡಿದ ಯುವಕರದ್ದಲ್ಲ ಎಂಬುದು ದೃಢಪಟ್ಟಿತು.
ಬೇರೆ ವ್ಯಕ್ತಿಯೊಬ್ಬನೇ ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದಾನೆ ಎಂಬುದೂ ಬೆಳಕಿಗೆ ಬಂದಿದೆ.
ಈ ಬೆಳವಣಿಗೆಯ ನಂತರ ಯುವಕ, ತನ್ನ ಮೇಲೆ ಸುಳ್ಳು ಆರೋಪ ಮಾಡಿ ಮಾನಹಾನಿ ಮಾಡಲಾಗಿದೆ ಎಂದು ಆರೋಪಿಸಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದರು. ಈ ದೂರಿನ ಆಧಾರದ ಮೇಲೆ ಕೆಫೆ ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್, ರಾಘವೇಂದ್ರ ರಾವ್ ಮತ್ತು ಮ್ಯಾನೇಜರ್ ಸುಮಂತ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.






