2019ರ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿತ್ತು. ಈ ತಂಡದಲ್ಲಿ ಅಂಬಾಟಿ ರಾಯುಡು ಬದಲು ವಿಜಯ್ ಶಂಕರ್‌ಗೆ ಸ್ಥಾನವನ್ನು ನೀಡಲಾಗಿತ್ತು. ತಂಡದಲ್ಲಿ ತನಗೆ ಸ್ಥಾನ ದೊರಕದಿದ್ದ ವಿಷಯ ತಿಳಿದ ಕೂಡಲೇ ಅಂಬಾಟಿ ರಾಯುಡು ಈ ವಿಶ್ವಕಪ್ ಟೂರ್ನಿಯನ್ನು ನೋಡಲು 3D ಕನ್ನಡಕ ಬೇಕು ಎಂದು ಟ್ವೀಟ್ ಮಾಡುವ ಮೂಲಕ ಆಯ್ಕೆ ಸಮಿತಿಯನ್ನು ಕಾಲೆಳೆದಿದ್ದರು. ದಿನ ಕಳೆದಂತೆ ಅಂಬಾಟಿ ರಾಯುಡು ಬದಲು ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದ ವಿಜಯ್ ಶಂಕರ್ ಕಳಪೆ ಪ್ರದರ್ಶನ ತೋರಿದಾಗಲೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಈ ‘3D’ ಟ್ಯಾಗ್ ಬಳಸಿ ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದರು.
ಆದರೆ ಈ ವಿಷಯದ ಕುರಿತು ಇದುವರೆಗೂ ಮಾತನಾಡದಿದ್ದ ವಿಜಯ್ ಶಂಕರ್ ಇದೀಗ ತುಟಿ ಬಿಚ್ಚಿದ್ದಾರೆ. ‘ನನಗೂ ಅದಕ್ಕೂ ಸಂಬಂಧವೇ ಇಲ್ಲ, 3D ಪ್ಲೇಯರ್ ಎಂಬ ಟ್ಯಾಗ್‌ನ್ನು ಸುಮ್ಮನೆ ನನ್ನ ಹೆಸರಿನ ಜೊತೆ ತಳುಕು ಹಾಕಿದರು ಮತ್ತು ಅದನ್ನು ವೈರಲ್ ಮಾಡಿದರು. ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ನಂತರ ಟೀಮ್ ಇಂಡಿಯಾ ಪರ 3 ಪಂದ್ಯಗಳನ್ನಾಡಿ ಒಳ್ಳೆಯ ಪ್ರದರ್ಶನವನ್ನೂ ನೀಡಿದೆ, ನಾನೇನು ಕೆಟ್ಟ ಪ್ರದರ್ಶನವನ್ನು ನೀಡಲಿಲ್ಲ. ಐಪಿಎಲ್ ಟೂರ್ನಿಯಲ್ಲಿ ನಾನು ಆಡುವ ಬ್ಯಾಟಿಂಗ್ ಕ್ರಮಾಂಕ ತುಂಬಾ ಭಿನ್ನವಾಗಿದೆ. ಕೆಲವೊಂದಷ್ಟು ಜನ ರಾಯುಡು ಜೊತೆ ನನ್ನನ್ನು ಹೋಲಿಸಿ ಟ್ರೋಲ್ ಮಾಡುತ್ತಾರೆ, ಆದರೆ ಆತ ಆಡುವ ಬ್ಯಾಟಿಂಗ್ ಕ್ರಮಾಂಕಕ್ಕೂ ನಾನು ಆಡುವ ಬ್ಯಾಟಿಂಗ್ ಕ್ರಮಾಂಕಕ್ಕೂ ತುಂಬಾ ವ್ಯತ್ಯಾಸವಿದೆ. ಅದನ್ನು ಗಮನಿಸದೆ ಮನರಂಜನೆಗೋಸ್ಕರ ತಮಗೆ ಬೇಕಾದ ರೀತಿಯಲ್ಲಿ ಟ್ರೋಲ್ ಮಾಡುತ್ತಾರೆ. ರಾಯುಡು ಮತ್ತು ನನ್ನ ಬ್ಯಾಟಿಂಗ್ ಕ್ರಮಾಂಕ ಬೇರೆಯಾಗಿರುವುದರಿಂದ ನಮ್ಮಿಬ್ಬರ ನಡುವೆ ಹೋಲಿಕೆ ಬೇಡವೇ ಬೇಡ’ ಎಂದು ವಿಜಯ್ ಶಂಕರ್ ನೆಟ್ಟಿಗರಿಗೆ ಉತ್ತರ ನೀಡಿದ್ದಾರೆ.
ಹೀಗೆ ತನ್ನನ್ನು ಟ್ರೋಲ್ ಮಾಡುವವರಿಗೆ ಉತ್ತರ ನೀಡುವುದರ ಮೂಲಕ ವಿಜಯ್ ಶಂಕರ್ 2 ವರ್ಷಗಳ ಬಳಿಕ ‘3D ಪ್ಲೇಯರ್’ ಟ್ಯಾಗ್ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗದೆ ಉಳಿದಿರುವ ವಿಜಯ್ ಶಂಕರ್ ಶ್ರೀಲಂಕಾ ವಿರುದ್ಧ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಡಲು ಅವಕಾಶ ಸಿಗುತ್ತಾ ಎಂದು ಎದುರು ನೋಡುತ್ತಿದ್ದಾರೆ.