ಕಾಂಗ್ರೆಸ್ ನ ಅಧ್ಯಕ್ಷ ರಾಹುಲ್ ಗಾಂಧಿ ಹುಟ್ಟಿದಾಗ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನಾನು ತರಬೇತಿ ನಿರತ ನರ್ಸ್ ಆಗಿದ್ದೆ ಎಂದು, ರಾಹುಲ್ ನವಜಾತ ಶಿಶುವಾಗಿದ್ದಾಗ ಅವರನ್ನು ಎತ್ತಿಕೊಂಡವರಲ್ಲಿ ನಾನೇ ಮೊದಲಿಗಳು ಎಂದು ಕೇರಳ ಮೂಲದ ನಿವೃತ್ತ ನರ್ಸ್ ಒಬ್ಬರು ರಾಹುಲ್ ಗಾಂಧಿ ಹುಟ್ಟಿನ ರಹಸ್ಯದ ಬಗ್ಗೆ ಮಾತನಾಡಿದ್ದಾರೆ.
ರಾಹುಲ್ ಗಾಂಧಿ ಪೌರತ್ವದ ಕುರಿತಾದ ಈಗ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ವಯನಾಡ್ ನ 72 ವರ್ಷದ ನಿವೃತ್ತ ನರ್ಸ್ ರಾಜಮ್ಮ ವವಾತಿಲ್ ಎಂಬುವವರು ರಾಹುಲ್ ಜನ್ಮದ ಬಗ್ಗೆ ಹೇಳಿಕೆ ನೀಡಿದ್ದಾರೆ.
ನಾನು ಅದೃಷ್ಟವಂತಳು ಎಂದೇ ಹೇಳಬಹುದು. ರಾಹುಲ್ ಗಾಂಧಿ ನವಜಾತ ಶಿಶುವಾಗಿದ್ದಾಗ ಎಂತಿಕೊಂಡ ಕೆಲವೇ ಕೆಲವರಲ್ಲಿ ನಾನು ಮೊದಲಿಗಳು. ರಾಹುಲ್ ಹುಟ್ಟಿದಾಗಲೇ ತುಂಬಾ ಮುದ್ದಾಗಿದ್ದರು. ಅವರು ಸುಂದರವಾಗಿದ್ದರು. ಅವರು ಹುಟ್ಟಿದ ಕ್ಷಣಕ್ಕೆ ನಾನೂ ಕೂಡ ಸಾಕ್ಷಿ ಎಂದಿದ್ದಾರೆ.
ಪ್ರಧಾನಿ ಇಂದಿರಾಗಾಂಧಿ ಮೊಮ್ಮಗನನ್ನು ಕಾಣಲು ನಾವೆಲ್ಲರೂ ತುದಿಗಾಲಲ್ಲಿ ನಿಂತು ಕಾದಿದ್ದೆವು ಎಂದು ಸ್ಮರಿಸಿದ್ದಾರೆ.
1970, ಜೂನ್ 19 ರಂದು ರಾಹುಲ್ ಗಾಂಧಿ ಹುಟ್ಟುವ ವೇಳೆ ರಾಜಮ್ಮ ನರ್ಸ್ ಆಗಿ ಸೇವೆಯಲ್ಲಿದ್ದರು ಎಂದು ತಿಳಿದು ಬಂದಿದೆ.
49 ವರ್ಷದ ನಂತರ ರಾಜಮ್ಮ ಈ ಘಟನೆ ಸ್ಮರಿಸಿಕೊಂಡಿದ್ದು, ರಾಹುಲ್ ಇಂದು ವಯಾನಾಡಿನಿಂದ ಲೋಕಸಭಾ ಚುನಾವಣಾ ಕಣದಲ್ಲಿದ್ದಾರೆ.
ರಾಹುಲ್ ಹುಟ್ಟಿನ ಬಗ್ಗೆ ಮಾತಾಡಿರುವ ನರ್ಸ್ ಸುಬ್ರಮಣಿಯನ್ ಸ್ವಾಮಿ ಆರೋಪವನ್ನು ಕೂಡ ತಳ್ಳಿ ಹಾಕಿದ್ದಾರೆ.