ರಿಂಗ್ ರೋಡ್ ನಲ್ಲಿ ಟೆಕ್ಕಿ ಗಿರೀಶ್ ಕೊಲೆ ಪ್ರಕರಣ: ಶುಭಾ ಸೇರಿ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ!
ನವದೆಹಲಿ: 2003ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸಂಚಲನಕಾರಿ ರಿಂಗ್ ರೋಡ್ ಟೆಕ್ಕಿ ಗಿರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆರೋಪಿಗಳಾದ ಶುಭಾ ಸೇರಿ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಲಾಗಿದೆ. ಈ ಕುರಿತು ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಆರೋಪಿಗಳಾದ ಶುಭಾ, ಅರುಣ್ ವರ್ಮ, ದಿನೇಶ್ ಹಾಗೂ ವೆಂಕಟೇಶ್ ಗೆ 8 ವಾರಗಳೊಳಗೆ ಶರಣಾಗಲು ಸೂಚನೆ ನೀಡಿದೆ.
ಈ ಪ್ರಕರಣ 2003ರಲ್ಲಿ ನಡೆದಿದೆ. ಗಿರೀಶ್ ಅವರ ನಿಶ್ಚಿತಾರ್ಥ ಶುಭಾ ಅವರೊಂದಿಗೆ ನಿಗದಿಯಾಗಿದ್ದರೂ, ಶುಭಾ ತನ್ನ ಪ್ರಿಯಕರ ಹಾಗೂ ಸ್ನೇಹಿತರ ಸಹಕಾರದಿಂದ ಗಿರೀಶ್ ಅವರನ್ನು ಕೊಲೆ ಮಾಡಿಸಿದ್ದಾಳೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣವು ಭಾರೀ ಸಂಚಲನ ಮೂಡಿಸಿತ್ತು.ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ತೀರ್ಪು 2010ರಲ್ಲಿ ಹೈಕೋರ್ಟ್ ಮೂಲಕವೂ ಎತ್ತಿಹಿಡಿಯಲ್ಪಟ್ಟಿತ್ತು. ನಂತರ, ಆರೋಪಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, 2014ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಸುಪ್ರೀಂ ಕೋರ್ಟ್ ಪ್ರಕರಣದ ಎಲ್ಲಾ ವಿಚಾರಣೆಗಳನ್ನು ಪರಿಶೀಲಿಸಿ, ಹೈಕೋರ್ಟ್ ತೀರ್ಪನ್ನು ಅನುಮೋದಿಸಿದ್ದು, ಆರೋಪಿಗಳಿಗೆ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿದೆ.