ಕಳೆದ ವರ್ಷ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಮತ್ತು ಈ ವರ್ಷ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಗಳಲ್ಲಿ ಮಿಂಚುವ ಮೂಲಕ ತಾನೊಬ್ಬ ಪ್ರತಿಭಾವಂತ ಆಟಗಾರ ಎಂಬುದನ್ನು ರಿಷಭ್ ಪಂತ್ ಸಾಬೀತುಪಡಿಸಿಕೊಂಡರು. ಕಾಲೆಳೆಯುತ್ತಿದ್ದವರಿಗೆಲ್ಲಾ ತಮ್ಮ ಬ್ಯಾಟ್ ಮೂಲಕ ಉತ್ತರ ನೀಡಿದ ರಿಷಭ್ ಪಂತ್ ಸದ್ಯ ಪ್ರಮುಖ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಬೆನ್ನಲ್ಲೇ ರಿಷಭ್ ಪಂತ್ ಕ್ರಿಕೆಟ್ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಗಾಯದ ಸಮಸ್ಯೆಗೆ ತುತ್ತಾಗಿ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವಂತಹ ಸಂದರ್ಭ ಬಂದಾಗ ಶ್ರೇಯಸ್ ಬದಲಿಗೆ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಎಂದು ಘೋಷಣೆ ಮಾಡಲಾಯಿತು.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್, ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರು ರಿಷಭ್ ಪಂತ್ ಅವರ ಬಗ್ಗೆ ಮಾತನಾಡಿದ್ದಾರೆ. ರಿಷಭ್ ಪಂತ್ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇದ್ದಂತೆ, ಅಂತಹ ಅದ್ಬುತ ಆಟಗಾರನನ್ನು ತಂಡದಲ್ಲಿ ಹೊಂದಿರುವುದು ಖುಷಿಯ ಸಂಗತಿ ಎಂದು ರಿಕಿ ಪಾಂಟಿಂಗ್ ಹೊಗಳಿದ್ದಾರೆ.