ರಾಜ್ಯಾದ್ಯಂತ ಗಣೇಶೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಡಿಜೆ ಬಳಸಬಾರದು ಎಂಬ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಯಾವುದೇ ಕಾರಣಕ್ಕೂ ಡಿಜೆ ಹಾಕಿಕೊಂಡು ಗಣಪತಿ ಮೂರ್ತಿ ಮೆರವಣಿಗೆ ಮಾಡುವಂತಿಲ್ಲ. ನೃತ್ಯ ಸೇರಿದಂತೆ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಿದೆ.
ಈ ಆದೇಶದ ನಡುವೆಯೇ ಈಗ ದಾವಣಗೆರೆ ತಹಶೀಲ್ದಾರ ಗಿರೀಶ್ ಗಣೇಶ ಹಬ್ಬ ಆಚರಣೆ ವೇಳೆ ಹಾಡಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್. ಆರ್. ಬೀಳಗಿ ಸಹ ಡಿಜೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿ ಗಣೇಶ ಹಬ್ಬ ಆಚರಣೆಗೆ ಆದೇಶ ಹೊರಡಿಸಿದ್ದರು. ಆದರೆ ಈಗ ದಾವಣಗೆರೆ ತಾಲೂಕಿನ ತುರ್ಚಘಟ್ಟದ ನಿರ್ಗತಿಕರ ಕೇಂದ್ರದಲ್ಲಿ “ಕುಲದಲ್ಲಿ ಕೀಳಾವುದೋ ಹುಚ್ಚಪ್ಪ’ ಹಾಡಿಗೆ ತಹಶೀಲ್ದಾರ ಗಿರೀಶ್ ಅಲ್ಲಿದ್ದವರ ಜೊತೆಯಲ್ಲಿ ಕುಣಿದು ಕುಪ್ಪಳಿಸಿರುವುದು ಚರ್ಚೆಗೆ ಕಾರಣವಾಗಿದೆ.

ದಾವಣಗೆರೆ ತಹಶೀಲ್ದಾರರಿಂದಲೇ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಆರೋಪ ಕೇಳಿ ಬಂದಿದ್ದು, ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಗಣೇಶ ಹಬ್ಬಕ್ಕೆ ಡಿಜೆ, ಮೆರವಣಿಗೆ ನಿರಾಕರಿಸಿದ ತಹಶೀಲ್ದಾರ ಗಿರೀಶ್ ಅವರೇ ನೃತ್ಯ ಮಾಡಿದ್ದಾರೆ. ಗಣಪತಿ ವಿಸರ್ಜನೆ ಹಿನ್ನೆಲೆ ಹಲವು ಮನೋರಂಜನಾ ಕಾರ್ಯಕ್ರಮಗಳಿಗೂ ನಿಷೇಧ ಹೇರಲಾಗಿದ್ದರೂ, ತಹಶೀಲ್ದಾರ ವರ್ತನೆಗೆ ಟೀಕೆಗಳು ಕೇಳಿ ಬರಲಾರಂಭಿಸಿವೆ.
ತುರ್ಚಘಟ್ಟ ಬಳಿ ಇರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಸ್ವತಃ ತಹಶೀಲ್ದಾರ ಗಿರೀಶ್ ನೇತೃತ್ವದಲ್ಲಿಯೇ ಮೂರ್ತಿ ಇಡಲಾಗಿತ್ತು. ಪೂಜೆ, ಪುನಸ್ಕಾರವೂ ನಡೆದಿತ್ತು. ಆದರೆ ಕೊರೊನಾ ಸೋಂಕು ಭೀತಿ ನಡುವೆಯೇ ಈ ರೀತಿಯಾದ ನೃತ್ಯ ಆಯೋಜಿಸುವ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆ ಕಾಡಲಾರಂಭಿಸಿದೆ






